   ಮೂಲದೊಂದಿಗೆ ದಯವಿಟ್ಟು ಪರಿಶೀಲಿಸಿ

ಎಳೆಗಳು: ಉಡುಪಿನ ಸಕಲ ಪ್ರಕಾರಗಳಲ್ಲಿಯೂ ಬಳಸಲಾಗುವ ನೈಸರ್ಗಿಕ ಮತ್ತು ಕೃತಕ ರಚನೆಗಳು (ಫೈಬರ್ಸ್). ಎಳೆ ಹೇಗೋ ಬಟ್ಟೆ ಹಾಗೆ ಎಂಬ ರೂಢಿಯ ಮಾತು ಬಟ್ಟೆಯ ಬಾಳ್ವಿಕೆ, ಹಿತ, ಅಂದಗಳಲ್ಲೆಲ್ಲ ಎಳೆಯ ಪಾತ್ರವನ್ನು ಎತ್ತಿಹಿಡಿದಿದೆ. ವಸ್ತ್ರೋದ್ಯಮದಲ್ಲಿ ಅಲ್ಲದೆ ಇತರ ರಂಗಗಳಲ್ಲಿಯೂ ಎಳೆಗಳಿಗೆ ಉಪಯೋಗ ಉಂಟು. ಎಳೆಗಳ ಆಕರಗಳನ್ನು ಅವಲಂಬಿಸಿ ಎಳೆಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸ ಬಹುದು-1 ನೈಸರ್ಗಿಕ, 2 ಅರ್ಧ ಕೃತಕ ಅಥವಾ ಪರಿವರ್ತಿತ, 3 ಪುರ್ಣ ಕೃತಕ.

ಹತ್ತಿ, ರೇಷ್ಮೆ, ಉಣ್ಣೆ ಮೊದಲಾದವು ನೈಸರ್ಗಿಕ ಎಳೆಗಳ ಆಕರಗಳು. ರೇಯಾನ್ ಒಂದು ಬಗೆಯ ಪರಿವರ್ತಿತ ಎಳೆ. ನೈಸರ್ಗಿಕ ಆಕರಗಳಾದ ಸೆಲ್ಯುಲೋಸ್ ಅಥವಾ ಜೀವಜನ್ಯ ಸಸಾರಜನಕಗಳನ್ನು ಯಾವುದಾದರೊಂದು ಲೀನಕಾರಿಯಲ್ಲಿ ವಿಲೀನಮಾಡಿ ದೊರೆಯುವ ದ್ರಾವಣದಿಂದ ಎಳೆಗಳನ್ನೆಳೆಯುವುದರಿಂದ ಪರಿವರ್ತಿತ ಎಳೆಗಳು ದೊರೆಯುತ್ತವೆ. ನೈಲಾನ್, ಟೆರಿಲೀನ್, ಅರ್ಲಾನ್ ಮೊದಲಾದ ಹೆಸರುಗಳಿಂದ ಪರಿಚಿತವಾಗಿರುವ ಅನೇಕ ಸರಪಳಿ ಪಾಲಿಮರುಗಳು ಕೃತಕ ಎಳೆಗಳೆನ್ನಿಸಿಕೊಳ್ಳುತ್ತವೆ.

ಮೇಲೆ ಉದಾಹರಿಸಿದ ಎಳೆಗಳೆಲ್ಲವೂ ಅಗಾರ್ಯ್‌ನಿಕ್ ಬಗೆಯವು. ಇನಾಗಾರ್ಯ್‌ನಿಕ್ ವಸ್ತುಗಳೂ ಎಳೆಗಳ ರೂಪದಲ್ಲಿರಬಹುದು. ಕಲ್ನಾರು ಮತ್ತು ಆ ಬಗೆಯ ಅನೇಕ ಸಿಲಿಕೇಟುಗಳು ನಿಸರ್ಗದಲ್ಲಿ ಎಳೆಗಳ ರೂಪದಲ್ಲಿರುತ್ತವೆ. ಇಲ್ಲವೇ ಅವನ್ನು ಅನಂತರ ಎಳೆಗಳಾಗಿ ಪರಿವರ್ತಿಸಬಹುದು. ಉಕ್ಕು, ಅನೇಕ ಲೋಹಗಳು, ಸಿಲಿಕ ಮತ್ತು ಗಾಜುಗಳನ್ನೂ ಎಳೆಗಳಾಗಿ ಪರಿವರ್ತಿಸಬಹುದು.

ಎಳೆಗಳ ಗುಣಲಕ್ಷಣಗಳು : ಎಳೆಗಳ ರಚನೆಯನ್ನು ಮೊತ್ತಮೊದಲು ಪರೀಕ್ಷಿಸಲಾಗುತ್ತದೆ. ರೇಷ್ಮೆಯನ್ನುಳಿದ ಸಹಜ ಎಳೆಗಳಲ್ಲಿ ಈ ಪ್ರತಿ ಎಳೆಯ ಉದ್ದ ಪರಿಮಿತಿ ಮತ್ತು ಕೇವಲ ಹಲವು ಅಂಗುಲಗಳಷ್ಟಿರುತ್ತದೆ. ಈ ಬಗೆಯ ಎಳೆಗಳ ನಯವೂ (ಫೈನ್ನೆಸ್) ಪರಿಮಿತ. ಕೃತಕ ಎಳೆಗಳನ್ನು ಅಪರಿಮಿತ ಉದ್ದದ ಅವಿಚ್ಛಿನ್ನ ತಂತುಗಳಾಗಿ ಪಡೆಯಬಹುದು. ಅಷ್ಟೇ ಅಲ್ಲದೆ ಅವನ್ನು ನೈಸರ್ಗಿಕ ಎಳೆಗಳಿಗಿಂತಲೂ ನಯವಾದ ತಂತುಗಳಾಗಿ ಪಡೆಯಬಹುದು.

ಅಡ್ಡಕೊಯ್ತಗಳ ಪರಿಶೀಲನೆಯಿಂದ ಒಂದೊಂದು ಎಳೆಯ ರಚನೆಯೂ ಒಂದೊಂದು ಬಗೆ ಎಂದು ತಿಳಿದಿದೆ. ನೈಲಾನ್ ಮತ್ತು ಹಲವು ಬಗೆಯ ರೇಯಾನುಗಳ ಅಡ್ಡಕೊಯ್ತ ವರ್ತುಲಾಕಾರ; ರೇಷ್ಮೆಯ ಎಳೆಗಳ ಅಡ್ಡಕೊಯ್ತ ತ್ರಿಕೋನಾಕಾರ; ಲಿನನ್ ಬಟ್ಟೆಯನ್ನು ತಯಾರಿಸಲಾಗುವ ಅಗಸೆ ನಾರಿನ ಅಡ್ಡಕೊಯ್ತ ಪಂಚಬಾಹು ಆಕಾರ; ಹತ್ತಿಯ ಎಳೆ ಪೊಳ್ಳಾದ ಪಟ್ಟಿ ಆಕಾರ; ಹೀಗೆ ವಿವಿಧ ಎಳೆಗಳ ಅಡ್ಡಕೊಯ್ತಗಳಿಗೆ ವಿವಿಧ ಆಕಾರಗಳಿರುವುದರಿಂದ ಅಡ್ಡಕೊಯ್ತಗಳ ಪರೀಕ್ಷೆಯಿಂದ ಎಳೆಗಳನ್ನು ಗುರುತು ಹಿಡಿಯಬಹುದು. ಇಂಥ ಪರೀಕ್ಷೆಯಲ್ಲಿ ಸೂಕ್ಷ್ಮ ದರ್ಶಕದ ನೆರವು ಅನಿವಾರ್ಯ.

ಯಾವುದೊಂದು ಬಗೆಯ ಅಡ್ಡಕೊಯ್ತ ಏಕಪ್ರಕಾರವಾಗಿರಬೇಕಾದುದರ ಅಗತ್ಯ ನೂಲುವಾಗ, ನೇಯುವಾಗ, ಹೆಣೆಯುವಾಗ ಮತ್ತು ಬಣ್ಣಹಾಕುವಾಗ ಕಂಡುಬರುತ್ತದೆ. ಉಡುಪನ್ನು ತಯಾರಿಸಿದಾಗ ಅದರ ಒಪ್ಪ ಮತ್ತು ಅದರ ಹೊರಸ್ವರೂಪಗಳು ಎಳೆಗಳ ಏಕಪ್ರಕಾರತೆಯನ್ನು ಅವಲಂಬಿಸಿರುತ್ತದೆ.

ಯಾವ ಬಳಕೆಗೆ ಯಾವ ಎಳೆಯನ್ನುಪಯೋಗಿಸಬೇಕೆಂದು ನಿರ್ಧರಿಸುವಾಗ ಹಲವು ಯಾಂತ್ರಿಕ ಗುಣಗಳ ಪರಿಶೀಲನೆ ಅಗತ್ಯ. ಧಾರಣ ಸಾಮಥರ್ಯ್‌ (ಟೆನ್ಸೈಲ್ ಸ್ಟ್ರೆಂತ್), ಆಘಾತ ನಿರೋಧಶಕ್ತಿ (ಇಂಪ್ಯಾಕ್ಟ್‌ ರೆಸಿಸ್ಟೆನ್ಸ್‌), ಶ್ರಮನಿರೋಧಶಕ್ತಿ (ಫೆಟೀಗ್ ರೆಸಿಸ್ಟೆನ್ಸ್‌), ಘರ್ಷಣಶಕ್ತಿ (ಅಬ್ರೇಶನ್ ರೆಸಿಸ್ಟೆನ್ಸ್‌), ಸ್ಥಿತಿಸ್ಥಾಪಕತೆ, ಮೃದುತ್ವ ಇತ್ಯಾದಿ ಈ ಗುಣಗಳು. ಇವನ್ನು ನೈಸರ್ಗಿಕ ಸ್ಥಿತಿಯಲ್ಲಿದ್ದಾಗ ಎಳೆಗಳು ಬಾಗಿದಾಗ, ತಿರುಚಿದಾಗ, ಒದ್ದೆಯಾದ ಸ್ಥಿತಿಯಲ್ಲಿದ್ದಾಗ ಅಳೆಯಲಾಗುತ್ತದೆ.

ಉಷ್ಣ, ವಿದ್ಯುತ್ ಮತ್ತು ದೃಗ್ ಲಕ್ಷಣಗಳನ್ನೂ ಪರಿಶೀಲಿಸುವುದುಂಟು. ಉಣ್ಣೆಯಂಥ ಹಲವು ಎಳೆಗಳು ಕಡಿಮೆ ವಿದ್ಯುದ್ವಾಹಕಗಳು. ಅವುಗಳಿಂದಾದ ಉಡುಪುಗಳು ಶರೀರದ ಉಷ್ಣ ನಷ್ಟವನ್ನು ತಡೆಯಬಲ್ಲವು. ಯಾವ ಬಗೆಯ ಎಳೆಯೇ ಆಗಲಿ ಅದನ್ನು ಉಡುಪುಗಳನ್ನು ತಯಾರಿಸಲು ಉಪಯೋಗಿಸಬೇಕಾದರೆ ಅದರ ಕರಗುವ ಬಿಂದು ಮತ್ತು ಮೆದು ಬಿಂದುಗಳು ಸಾಕಷ್ಟು ಹೆಚ್ಚಿರಬೇಕು. ಉಷ್ಣತೆ ಕಡಿಮೆಯಾದಂತೆ ಎಳೆಯ ಗುಣಲಕ್ಷಣಗಳಲ್ಲಿ ತೀವ್ರ ವ್ಯತ್ಯಾಸವಾಗಬಾರದು. ಉಡುಪಿಗಾಗಿ ಉಪಯೋಗಿಸುವ ಎಳೆಗಳಲ್ಲಿ ವಿದ್ಯುದ್ವಾಹಕತೆ ಹೆಚ್ಚಿರಬಾರದು. ದೃಗ್ ಲಕ್ಷಣಗಳಲ್ಲಿ ಹೊಳಪು ಎಳೆಯ ಆಕಾರವನ್ನು ಮಾತ್ರವಲ್ಲದೆ, ಎಳೆಯ ತಯಾರಿಕೆ ಮತ್ತು ಸಂಸ್ಕರಣ ವಿಧಾನಗಳನ್ನು ಸಹ ಅವಲಂಬಿಸಿರುತ್ತದೆ.
ಉಡುಪಿಗಾಗಿ ಉಪಯೋಗಿಸುವ ಎಳೆಗಳು ರಾಸಾಯನಿಕವಾಗಿ ಆದಷ್ಟು ನಿರೋಧಶಕ್ತಿಯನ್ನು ಪಡೆದಿರುವುದು ಉತ್ತಮ. 600 - 800 ಸೆಂ. ಉಷ್ಣತೆಯಲ್ಲಿರುವ ತೆಳು ಆಮ್ಲ ದ್ರಾವಣಗಳು, ಸಾಮಾನ್ಯ ಸಾವಯವ ಲೀನಕಾರಿಗಳು, ಆಕ್ಸಿಜನ್ ನೀರು-ಇವುಗಳೊಡನೆ ವರ್ತಿಸುವಂತಿರಬಾರದು. ಬೂಷ್ಟು ಮೊದಲಾದವನ್ನು ತಕ್ಕಮಟ್ಟಿಗೆ ಪ್ರತಿಬಂಧಿಸಬೇಕು. ಬಣ್ಣಗಳನ್ನು ಸಾಕಷ್ಟು ಸುಲಭವಾಗಿ ಹಿಡಿಯುವಂತಿರಬೇಕು. ಬೇಕಿರುವ ಇಲ್ಲ ಗುಣಗಳನ್ನೂ ಪಡೆದಿರುವ ಎಳೆಗಳಿಲ್ಲ. ಆದ್ದರಿಂದ ಸಂದರ್ಭಗಳಿಗನುಗುಣವಾಗಿ ಯಾವ ಲಕ್ಷಣಗಳು ಅಪೇಕ್ಷಿತವೋ ಆ ಲಕ್ಷಣಗಳನ್ನುಳ್ಳ ಎಳೆಗಳನ್ನು ಆರಿಸಬೇಕಾಗುತ್ತದೆ. ಸಾಮಾನ್ಯವಾಗಿ ನೈಸರ್ಗಿಕ ಎಳೆಗಳು ಲೀನಕಾರಿಗಳನ್ನು ನಿರೋಧಿಸಿದರೂ ಅವುಗಳಿಗೆ ಆಮ್ಲ ನಿರೋಧಶಕ್ತಿ ಇರುವುದಿಲ್ಲ. ಕೃತಕ ಎಳೆಗಳಲ್ಲಿ ಹಲವಕ್ಕೆ ಆಮ್ಲ ನಿರೋಧಶಕ್ತಿ ಇದೆ. ಆದರೆ ಲೀನಕಾರಿಗಳಲ್ಲಿ ಸುಲಭವಾಗಿ ಲೀನವಾಗುತ್ತದೆ. ಕೃತಕ ಎಳೆಗಳ ಮೇಲೆ ಬೂಷ್ಟು ಬರುವ ಸಂಭವ ಕಡಿಮೆ. ಸಹಜ ಬಣ್ಣಗಳನ್ನೇ ತಯಾರಿಸಬೇಕಾಯಿತು, ಆದರೆ ಹಲವು ಪಾಲಿ ಅಮೈಡ್, ಪಾಲಿ ಯುರೆಥೇನ್ ಮತ್ತು ಪಾಲಿ ಅಕ್ರಿಲೋನೈಟ್ರೆಲ್ ಮತ್ತು ಪಾಲಿ ಎಸ್ಟರ್ ಎಳೆಗಳು ಅನೇಕ ಅಪೇಕ್ಷಿತ ಗುಣಗಳನ್ನು ಪಡೆದಿವೆ. ತಯಾರಿಕೆಯ ವಿಧಾನಗಳಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿ ಇಲ್ಲ ಅಪೇಕ್ಷಿತ ಗುಣಗಳನ್ನೂ ಪಡೆದಿರುವ ಕೃತಕ ಎಳೆಗಳನ್ನು ತಯಾರಿಸಲು ಸಾಧ್ಯವಾಗಬಹುದೆಂದು ನಂಬಲಾಗಿದೆ.

ಎಳೆಗಳಲ್ಲಿ ಕೆಲವು ಭಾಗಗಳಲ್ಲಿ ಅಣು ಜೋಡಣೆ ಒಂದು ನಿರ್ದಿಷ್ಟ ನಿಯತ ಕ್ರಮದಲ್ಲಿ ಆಗಿರುವುದುಂಟು. ಆ ಭಾಗಗಳನ್ನು ಕ್ರಿಸ್ಟಲೈಟುಗಳೆಂದು ಕರೆಯಲಾಗುತ್ತದೆ ಮತ್ತು ಎಕ್ಸ್‌ಕಿರಣ ಪರೀಕ್ಷೆಯಿಂದ ಎಳೆಗಳಲ್ಲಿ ಕ್ರಿಸ್ಟಲೈಟುಗಳ ಅಂಶವೆಷ್ಟೆಂದು ತಿಳಿಯಬಹುದು. ಉಣ್ಣೆ, ಸೆಲ್ಯುಲೋಸ್ ಅಸಿಟೇಟುಗಳಲ್ಲಿ ಕ್ರಿಸ್ಟಲೈಟುಗಳ ಅಂಶ ಕಡಿಮೆ. ಆದರೆ ರೇಷ್ಮೆ, ಸೆಣಬಿನ ಎಳೆ, ಲಿನನ್ ಹಾಗೂ ಹಲವು ಬಗೆಯ ನೈಲಾನು ಮತ್ತು ರೇಯಾನುಗಳಲ್ಲಿ ಕ್ರಿಸ್ಟಲೈಟುಗಳ ಅಂಶ 80%ಕ್ಕಿಂತಲೂ ಹೆಚ್ಚಿರಬಹುದು. ಸೂಕ್ತ ರೀತಿಯಲ್ಲಿ ಎಳೆಗಳನ್ನು ಎಳೆಯುವುದರಿಂದ ಕ್ರಿಸ್ಟಲೈಟುಗಳ ವಿನ್ಯಾಸ (ಓರಿಯೆಂಟೇಶನ್) ಏಕಮುಖವಾಗಿರುವಂತೆ ಮಾಡಬಹುದು. ಹೀಗೆ ಮಾಡಿದಾಗ ಧಾರಣ ಸಾಮಥರ್ಯ್‌ ಹೆಚ್ಚುತ್ತದೆ. ಆದರೆ ಈ ಬಗೆಯ ಎಳೆಯ ಸ್ಥಿತಿ ಸ್ಥಾಪಕತೆ, ಘರ್ಷಣ ನಿರೋಧಶಕ್ತಿ ಮತ್ತು ಬಣ್ಣ ಹೀರುವ ಶಕ್ತಿಗಳು ಕಡಿಮೆಯಿರುತ್ತವೆ.

ನೈಸರ್ಗಿಕ ಎಳೆಗಳು: ಇವನ್ನು ಸ್ಥೂಲವಾಗಿ ಸಸ್ಯಜನ್ಯ ಮತ್ತು ಪ್ರಾಣಿ ಜನ್ಯ ಎಂದು ವಿಭಾಗಿಸಬಹುದು. ಸಾಮಾನ್ಯವಾಗಿ ಸಸ್ಯಜನ್ಯ ಎಳೆಗಳು ಸೆಲ್ಯುಲೋಸ್ ಅಣುಗಳಿಂದಲೂ ಪ್ರಾಣಿಜನ್ಯ ಎಳೆಗಳು ಸಸಾರಜನಕ ಅಣುಗಳಿಂದಲೂ ಕೂಡಿ ಆಗಿರುತ್ತವೆ. ಸಸ್ಯಜನ್ಯ ಎಳೆಗಳಲ್ಲಿ ಹಲವು ಒರಟು ಮತ್ತೆ ಹಲವು ಮೃದುವಾಗಿಯೂ ನುಣುಪಾಗಿಯೂ ಇರುತ್ತವೆ. ತೆಂಗಿನನಾರು, ಮನಿಲ್ಲಾ ಹೆಂಪ್ ಎನ್ನಿಸಿಕೊಳ್ಳುವ ಫಿಲಿಪೈನಿನ ಅಭಾಕ, ದಕ್ಷಿಣ ಅಮೆರಿಕದ ಮಾರಿಷಸ್, ಆಫ್ರಿಕ ಮತ್ತು ದಕ್ಷಿಣ ಅಮೆರಿಕದ ಅನೇಕ ಭಾಗಗಳಲ್ಲಿ ದೊರೆಯುವ ಸಿಸಾಲ್ ಮೊದಲಾದುವುಗಳು ಒರಟು ಎಳೆಗಳು. ಇವನ್ನು ಸಾಮಾನ್ಯವಾಗಿ ಉಡುಪಿಗಾಗಿ ಬಳಸಲಾಗುವುದಿಲ್ಲ. ಆದರೆ ಇವುಗಳ ಧಾರಣ ಸಾಮಥರ್ಯ್‌ವೇ ಮೊದಲಾದ ಉತ್ತಮ ಗುಣಲಕ್ಷಣಗಳ ದೆಸೆಯಿಂದ, ಹಗ್ಗ, ಹುರಿಗಳಿಗಾಗಿ, ಒರಟು ಕಾಲೊರಸುವ ಚಾಪೆಗಳು ಉಜ್ಜುವ ಬ್ರಷ್ಷುಗಳು. ಸೋಫ ಮೊದಲಾದ ಆಸನಗಳಲ್ಲಿ ಸ್ಪ್ರಿಂಗುಗಳ ಮಧ್ಯೆ ತುಂಬುವ ವಸ್ತುಗಳಾಗಿ ಇವನ್ನು ಉಪಯೋಗಿಸಲಾ ಗುತ್ತದೆ. ನಮ್ಮ ದೇಶದಲ್ಲಿ ದೊರೆಯುವ ಒರಟು ಎಳೆಯೆಂದರೆ ತೆಂಗಿನ ನಾರೊಂದೇ.

ಮೃದು ಎಳೆಗಳಲ್ಲಿ ಹತ್ತಿ, ಲಿನನ್ ಮತ್ತು ಸೆಣಬಿನ ಎಳೆಗಳು ಮುಖ್ಯವಾದುವು. ಇವನ್ನು ಒಂದೊಂದಾಗಿ ಮುಂದೆ ಪರಿಶೀಲಿಸಲಾಗಿದೆ.

ಹತ್ತಿಯ ಗಿಡವನ್ನು ನೆಟ್ಟ ವರ್ಷವೊಂದರೊಳಗೆ ಫಸಲು ದೊರೆಯುತ್ತದೆ. ಯಾಂತ್ರಿಕವಾಗಿ ಅಥವಾ ಯಂತ್ರಗಳ ನೆರವಿಲ್ಲದೆ ಹತ್ತಿಯ ತೊಳೆಗಳನ್ನು ಆರಿಸಲಾಗುತ್ತದೆ. ಬಲಿತು ಪಕ್ವವಾಗಿ ಒಡೆದ ಕಾಯಿಯಿಂದ ಬಂದ ಹತ್ತಿ ಮಾತ್ರ ಉತ್ತಮವಾದದು. ಅಪಕ್ವ ಕಾಯಿಯಿಂದ ಬಂದ ಹತ್ತಿ ಅನುಪಯುಕ್ತ. ಪಕ್ವ ಹತ್ತಿಯಲ್ಲಿ ಸಹಜವಾಗಿರುವ ಎಳೆಗಳಲ್ಲಿ ತಿರುಚುಗಳಿರುತ್ತವೆ. ಇವು ನೂಲನ್ನು ನೂಲುವಾಗ ಅನುಕೂಲವಾಗುವಂತೆ ಮಾಡುತ್ತವೆ. ಜಿನ್ ಯಂತ್ರಗಳನ್ನುಪಯೋಗಿಸಿ ಬೀಜ, ಎಲೆ ಮುಂತಾದ ಅನಪೇಕ್ಷಿತ ವಸ್ತುಗಳನ್ನು ಹೀಗೆ ಆರಿಸಿದ ಹತ್ತಿಯಿಂದ ಬೇರ್ಪಡಿಸಲಾಗುತ್ತದೆ. ಈ ಹತ್ತಿಯನ್ನು ಅನಂತರ ಹಲವು ಹಂತಗಳಲ್ಲಿ ನೂಲನ್ನೆಳೆಯಲು ಉಪಯೋಗಿಸಲಾಗುತ್ತದೆ.

ಹತ್ತಿ ಸ್ವಚ್ಛ ಬಿಳಿಯಿರುವುದು ಅಪುರ್ವ, ಬೆಳೆಯುವ ವಾತಾವರಣಕ್ಕೆ ಅನುಗುಣವಾಗಿ ತೆಳುಹಳದಿ, ತೆಳು ಕಂದು ಅಥವಾ ತೆಳುನೀಲಿ ಬಣ್ಣವಿರುವದು ಕಂಡು ಬಂದಿದೆ. ಎಳೆಗಳ ಸರಾಸರಿ ಉದ್ದಕ್ಕೆ ಅನುಗುಣವಾಗಿ ಹತ್ತಿಯನ್ನು ವರ್ಗೀಕರಿಸ ಬಹುದು. ಸು. 28.5ಮೀ.ಗಿಂತ ಉದ್ದದ ಎಳೆಗಳನ್ನುಳ್ಳ ದೀರ್ಘಸ್ಟೇಪಲ್ ಹತ್ತಿ ಅತ್ಯುತ್ತಮವಾದುದು. ಸು. 22ಮೀ.-28.5ಮೀ. ಉದ್ದದ ಹತ್ತಿ ಮಧ್ಯಮ ದರ್ಜೆಯದು. ಸು. 22ಮೀ ಉದ್ದಕ್ಕಿಂತ ಕಡಿಮೆ ಎಳೆ ಉದ್ದದ ಕಿರುಸ್ಟೇಪಲ್ ಹತ್ತಿ ಕೀಳು ದರ್ಜೆಯದು.

ಹತ್ತಿಯಲ್ಲಿನ ಮುಖ್ಯ ರಾಸಾಯನಿಕ ವಸ್ತು ಸೆಲ್ಯುಲೋಸ್ (ಶೇ.94). ಉಳಿದ ಇತರ ವಸ್ತುಗಳಲ್ಲಿ ಮುಖ್ಯವಾದುದು ಎಳೆಗಳನ್ನು ಒಟ್ಟಾಗಿ ಹಿಡಿಯಲು ಸಹಾಯಕವಾಗಿರುವುದು ಒಂದು ಬಗೆಯ ಮೇಣ. ನೂಲನ್ನೆಳೆಯುವಾಗ ಈ ಮೇಣ ಸಹಾಯಕವಾಗುತ್ತದೆ.

ಲಿನನ್ ಎಳೆಗಳು ಒಂದು ಬಗೆಯ ಅಗಸೆಯ ಗಿಡದ ನಾರಿನಿಂದ ತಯಾರಾಗುತ್ತವೆ. ಗಿಡಗಳು ಪುರ್ಣವಾಗಿ ಬೆಳೆದು ನಿಂತ ಮೇಲೆ ಒಟ್ಟು ಗಿಡವನ್ನೇ ಕೊಯ್ಲುಮಾಡಿ ಬೀಜ ಎಲೆಗಳನ್ನು ಬೇರ್ಪಡಿಸಿ. ಕಾಂಡಗಳನ್ನು ಕಟ್ಟುಗಳನ್ನಾಗಿ ಕಟ್ಟಿ ಹವೆಯಲ್ಲಿ ಅಥವಾ ನೀರಿನಲ್ಲಿ ನೆನೆಸಲಾಗುತ್ತದೆ. ಆಗ ಕಾಂಡದಲ್ಲಿ ಎಳೆಗಳನ್ನು ಒಟ್ಟಾಗಿ ಹಿಡಿದಿರುವ ಅಂಟು ಪದಾರ್ಥ ನಷ್ಟವಾಗಿ ಎಳೆಗಳು ಮಾತ್ರ ಉಳಿಯುತ್ತವೆ. ಹೀಗೆ ದೊರೆತ ಎಳೆಗಳನ್ನು ಬಾಚಣಿಗೆಯಂಥ ಉಪಕರಣಗಳಿಂದ ಬಾಚಿ ನೇರ ಮಾಡಿಕೊಂಡು ನೂಲೆಳೆಯಲಾಗುತ್ತದೆ. ಈ ನೂಲನ್ನೂ ಹತ್ತಿಯ ನೂಲಿನಂತೆಯೇ ನೇಯಬಹುದು. ಮತ್ತು ಹೊಳಪಿಗಾಗಿ ಸಂಸ್ಕರಿಸಬಹುದು. ಲಿನನ್ನಿನಲ್ಲಿಯೂ ಮುಖ್ಯ ರಾಸಾಯನಿಕ ವಸ್ತು ಸೆಲ್ಯುಲೋಸ್.
ಸೆಣಬಿನ ಎಳೆ ಹತ್ತಿ ಮತ್ತು ಲಿನನ್ನೂಗಳಷ್ಟು ಮೃದುವಾದುದಲ್ಲ. ಎಳೆಗಳನ್ನು ಲಿನನ್ ಎಳೆಗಳನ್ನು ತಯಾರಿಸಿದಂತೆಯೇ ಸೆಣಬಿನ ಗಿಡಗಳನ್ನು ಸಂಸ್ಕರಿಸಿ ಪಡೆದು ಅನಂತರ ನೂಲಾಗುತ್ತದೆ. ಹತ್ತಿ ಮತ್ತು ಲಿನನ್ ನೂಲುಗಳಿಗಿಂತ ಹೀಗೆ ಒದಗಿದ ನೂಲು ದಪ್ಪವಾಗಿರುತ್ತದೆ. ಇದನ್ನು ಗೋಣಿಯ ಚೀಲ, ಗಟ್ಟಿದಾರ, ಬಲೆಗಳು ಹುರಿಗಳು ಮೊದಲಾದುವನ್ನು ತಯಾರಿಸಲು ಉಪಯೋಗಿಸುತ್ತಾರೆ. ಎಳೆಗಳ ಮುಖ್ಯ ರಾಸಾಯನಿಕವಸ್ತು ಸೆಲ್ಯುಲೋಸ್.

ಸೆಣಬಿನ ಜಾತಿಗೆ ಸೇರಿದ ಸನ್ ಹೆಂಪ್ ಎಂಬ ಗಿಡದಲ್ಲಿಯೂ ಸೆಲ್ಯುಲೋಸ್ ಎಳೆಗಳಿರುತ್ತವೆ. ಆದರೆ ಇವನ್ನು ನೂಲುವುದಕ್ಕಿಂತಲೂ ಹೆಚ್ಚಾಗಿ ವಿಶಿಷ್ಟ ದರ್ಜೆಯ ಕಾಗದಗಳನ್ನು ತಯಾರಿಸಲು ಉಪಯೋಗಿಸಲಾಗುತ್ತದೆ.

ಜಪಾನ್ ಮತ್ತು ದಕ್ಷಿಣ ಏಷ್ಯ, ಯುರೋಪುಗಳಲ್ಲಿ ಬೆಳೆಯುವ ರಿಯಾ ಎಂಬ ಪೊದೆಯೊಂದರಿಂದ ತಯಾರಿಸಲಾಗುವ ರೇಮೀ ಎಂಬ ನೂಲು ಬಲುಮಟ್ಟಿಗೆ ಲಿನನ್ನು ಹೋಲುತ್ತದೆ. ಈ ಎಳೆಗಳ ಹೊಳಪು, ಸಾಮಥರ್ಯ್‌ಗಳು ಲಿನನಿಗಿಂತಲೂ ಉತ್ತಮವಾದುದು. ಇದರ ಸಂಸ್ಕರಣ ಹೆಚ್ಚು ವೆಚ್ಚದ ಕ್ರಿಯೆ. ಚೀನದಲ್ಲಿ ಮಾತ್ರ ಇದನ್ನು ಈಗ ತಯಾರಿಸಲಾಗುತ್ತಿದೆ. ಬಟ್ಟೆ, ದಾರಗಳನ್ನು ಮಾತ್ರವಲ್ಲದೆ, ಬಲೆಗಳನ್ನು ತಯಾರಿಸಲೂ ಇದನ್ನು ಉಪಯೋಗಿಸಬಹುದು.
ಬಹುತೇಕ ಎಲ್ಲ ಸಸ್ಯಜನ್ಯ ಎಳೆಗಳಲ್ಲೂ ಮುಖ್ಯ ರಾಸಾಯನಿಕ ವಸ್ತು ಸೆಲ್ಯುಲೋಸ್, ಸೆಲ್ಯುಲೋಸಿನ ಬೃಹದಣುಗಳು ಸಾವಿರಾರು ಸೆಲ್ಲೊ ಬಂiೆÆೕಸ್ ಎಂಬ ಅಣುಗಳು ಕೂಡಿ ಆಗಿವೆ. ಸೆಲ್ಲೋ ಬಂiೆÆೕಸ್ ಅಣುವೊಂದು ಎರಡು ಬೀಟ ಗ್ಲೂಕೋಸ್ ಅಣುಗಳು ಈಥರ್ ಬಂಧದ ಮೂಲಕ ಸೇರಿ ಆಗಿರುತ್ತದೆ. ಅನೇಕ ಸೆಲ್ಲೊಬಂiೆÆೕಸ್ ಅಣುಗಳು ನಿರ್ದಿಷ್ಟ ರೀತಿಯಲ್ಲಿ (ನೇರ ಸರಣಿಯಲ್ಲಿ) ಈಥರ್ ಬಂದಗಳ ಮೂಲಕ ಸೇರಿ ಸೆಲ್ಯುಲೋಸ್ ಬೃಹದಣುವೊಂದರ ಸೃಷ್ಟಿಯಾಗುತ್ತದೆ. ಸೆಲ್ಯುಲೋಸಿನ ಅಣುಗಾತ್ರ ಆಕಾರ ಮತ್ತು ಸಂಸ್ಕರಣಗಳನ್ನು ಅವಲಂಬಿಸಿದೆ.

ಹತ್ತಿ ಮತ್ತು ಲಿನನ್ ಎಳೆಗಳಿಂದಾದ ಬಟ್ಟೆಗಳನ್ನು ಚೆಲುವೆ ಕ್ರಿಯಿಗೆ (ಬ್ಲಿಚಿಂಗ್) ಒಳಪಡಿಸಿ ಶುದ್ಧ ಬಿಳಿ ಬಣ್ಣದ ಬಟ್ಟೆಗಳನ್ನು ಪಡೆಯಬಹುದು. ಸಾರಗುಂದಿದ (ಡೈಲ್ಯೂಟ್) ಕ್ಷಾರ ದ್ರಾವಣದಲ್ಲಿ ಅದ್ದಿ ತೆಗೆಯುವ ಮರ್ಸರಿಕರಣ (ಮರ್ಸರೈಸೇಶನ್) ಎಂಬ ಸಂಸ್ಕರಣದಿಂದ ಬಟ್ಟೆಯ ಧಾರಣ ಸಾಮಥರ್ಯ್‌ ಮತ್ತು ಹೊಳಪು ಹೆಚ್ಚುತ್ತವೆ. ಹೊಳಪನ್ನು ಹೆಚ್ಚಿಸಲು ಬಟ್ಟೆಯನ್ನು ಎರಡು ಬಿಸಿ ರೋಲರುಗಳ ಮಧ್ಯೆ ಹೋಗುವಂತೆ ಮಾಡಬಹುದು. ಈ ಸಂಸ್ಕರಣಕ್ಕೆ ಕ್ಯಾಲೆಂಡರಿಂಗ್ ಎಂದು ಹೆಸರು.

ಪ್ರಾಣಿಜನ್ಯ ಎಳೆಗಳಲ್ಲಿ ರೇಷ್ಮೆ ಮತ್ತು ಉಣ್ಣೆಗಳು ಮುಖ್ಯವಾದುವು. ರೇಷ್ಮೆಯ ಹುಳುವಿನ ಮೊಟ್ಟೆಗಳು ಒಡೆದಾಗ ಹೊರಬರುವ 2-3 ಮಿ. ಮೀ. ಉದ್ದದ ಹುಳುಗಳು ಮಲ್ಬೆರಿ (ಹಿಪ್ಪನೇರಳೆ) ಎಲೆಗಳನ್ನು ತಿಂದು 5-10 ಸೆಂ. ಮೀ. ನಷ್ಟು ಉದ್ದ ಬೆಳೆಯುತ್ತವೆ. ಹೀಗೆ ಪ್ರೌಢಾವಸ್ಥೆಯನ್ನು ಪಡೆದ ಹುಳು ತನ್ನ ತಲೆಯ ಬಳಿಯಿರುವ ತಂತುಕದಂಥ ರಂಧ್ರದಿಂದ ರಸವೊಂದನ್ನು ಹೊರಚೆಲ್ಲುತ್ತದೆ. ಈ ರಸ ಗಾಳಿಯ ಸಂಪರ್ಕಕ್ಕೆ ಬಂದ ಕೂಡಲೇ ಗಟ್ಟಿಯಾಗಿ ಎಳೆಯಾಗುತ್ತದೆ. ಹೀಗೆ ಅಖಂಡವಾದ ಎಳೆಯಿಂದ ತನ್ನನ್ನೇ ಸುತ್ತುವರಿದುಕೊಂಡು ನಾಲ್ಕೈದು ದಿವಸಗಳಲ್ಲಿ ತನ್ನ ಕಾಯಾಂತರಣ ಅಥವಾ ರೂಪಾಂತರಣಕ್ಕೆ ಬೇಕಾಗುವ ನಿದ್ರೆಗೆ ಆವಶ್ಯಕವಾದ ಕಕೂನ್ ಅಥವಾ ಕೋಶವನ್ನು ಸಿದ್ಧಮಾಡಿಕೊಳ್ಳುತ್ತದೆ. ಪುರ್ಣ ಕಾಲಾವಕಾಶ ಕೊಟ್ಟಲ್ಲಿ ಕ್ಷಾರವಸ್ತುವನ್ನು ಒಸರಿಸಿ ಕಕೂನಿನ ಭಾಗವೊಂದನ್ನು ನಾಶಮಾಡಿ ರೂಪಾಂತರ ಹೊಂದಿದ ಚಿಟ್ಟೆ ಹೊರಬರುತ್ತದೆ. ಆದರೆ ಚಿಟ್ಟೆಯಾಗುವ ಮೊದಲೇ ಕಕೂನಿನಿಂದ ರೇಷ್ಮೆಯ ಎಳೆಯನ್ನು ಪಡೆಯಲಾಗುತ್ತದೆ. ಕಕೂನುಗಳನ್ನು ಬಿಸಿ ನೀರಿನಲ್ಲಿಟ್ಟಾಗ ಅದರಲ್ಲಿನ ಸೆರಿಸಿನ್ ಎಂಬ ಅಂಟುಪದಾರ್ಥ ನೀರಿನಲ್ಲಿ ಸ್ವಲ್ಪ ಮಟ್ಟಿಗೆ ಲೀನವಾಗಿ, ಫೈಬ್ರಾಯ್ನ್‌ ಎಂಬ ಉಳಿದ ಭಾಗ ಮೆದುವಾಗಿ ಅದರಿಂದ ಎಳೆಗಳನ್ನು ಅಖಂಡವಾಗಿ ಎಳೆಯಲು ಸಾಧ್ಯವಾಗುತ್ತದೆ. ರೇಷ್ಮೆಯ ಒಂಟಿ ಎಳೆ ಬಲು ಸೂಕ್ಷ್ಮ; ಮತ್ತು ಅದರಲ್ಲಿ ಅಷ್ಟು ಬಲವಿರುವುದಿಲ್ಲ. ಆದ್ದರಿಂದ ಹೆಚ್ಚು ಎಳೆಗಳನ್ನು ಕೂಡಿಸಿ ತಿರುವುಗಳನ್ನು ಕೊಟ್ಟು ನೂಲನ್ನು ತಯಾರಿಸಲಾಗುತ್ತದೆ. ನೂಲಿನಲ್ಲಿನ ಎಳೆಗಳ ಸಂಖ್ಯೆ ಮತ್ತು ಪ್ರತಿ ಅಂಗುಲಕ್ಕೆ ಕೊಡಲಾಗುವ ತಿರುವುಗಳ ಸಂಖ್ಯೆಯನ್ನನುಸರಿಸಿ ನೂಲುಗಳನ್ನು ಕ್ರೇಪ್, ಜಾರ್ಜೆಟ್ ಮೊದಲಾಗಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಕಚ್ಚ ರೇಷ್ಮೆಯ ನೂಲಿನಲ್ಲಿ ಮುಕ್ಕಾಲು ಭಾಗದಷ್ಟು ಫೈಬ್ರಾಯ್ನ್‌ ಮತ್ತು ಉಳಿದ ಕಾಲುಭಾಗದಷ್ಟು ಸೆರಿಸಿನ್ ಇರುತ್ತದೆ. ಸೆರಿಸಿನ್ ರೇಷ್ಮೆಯ ಎಳೆ ಮಂಕಾಗಿ ಕಾಣುವಂತೆ ಮಾಡುವುದಾದರೂ ಎಳೆಗಳನ್ನು ಕೀಟಗಳಿಂದ ರಕ್ಷಿಸುವುದಕ್ಕಾಗಿ ನೇಯುವ ಸಮಯದವರೆವಿಗೆ ಸೆರಿಸಿನನ್ನು ಹಾಗೆಯೇ ಬಿಟ್ಟಿರಲಾಗುತ್ತದೆ. ಸೆರಿಸಿನ್ ಕಳೆದು ಕೊಂಡ ರೇಷ್ಮೆಯ ಎಳೆಗೆ ಸಾಕಷ್ಟು ಹೊಳಪಿದ್ದರೂ ವಿವಿಧ ಸಂಸ್ಕರಣಗಳಿಂದ ಅದರ ಹೊಳಪು, ನಯ ಮತ್ತು ಧಾರಣ ಸಾಮಥರ್ಯ್‌ಗಳು ಹೆಚ್ಚುವಂತೆ ಮಾಡಲಾಗುತ್ತದೆ.

ಮತ್ತೊಂದು ಪ್ರಾಣಿಜನ್ಯ ಎಳೆಯಾದ ಉಣ್ಣೆಗೆ ಕುರಿಗಳ ತುಪ್ಪಟವೇ (ಫ್ಲೀಸ್) ಆಕರ. ಇದು ಚರ್ಮದ ಕೆಳಭಾಗದ ಗ್ರಂಥಿಗಳಲ್ಲಿ ದ್ರವವಾಗಿ ತಯಾರಾಗಿ ಹೊರಬಂದು ಕೂಡಲೇ ಘನೀಭವಿಸಿ ತುಪ್ಪಟವಾಗುತ್ತದೆ. ಕುರಿಯ ಮೈಮೇಲಿನಿಂದ ಕತ್ತರಿಸಿ ತುಪ್ಪಟ ಅಥವಾ ಉಣ್ಣೆಯ ಎಳೆಗಳನ್ನು ಪಡೆದು ನೂಲು ತಯಾರಿಸಬಹುದು. ಈ ಎಳೆಯಲ್ಲಿನ ಮುಖ್ಯ ಸಂಯುಕ್ತ ಕೆರಾಟಿನ್ ಎಂಬ ಪ್ರೋಟೀನ್.

ಉಣ್ಣೆ ಮತ್ತು ರೇಷ್ಮೆಗಳಲ್ಲಿನ ಮುಖ್ಯ ಸಂಯುಕ್ತಗಳು ಸಸಾರಜನಕ ಅಥವಾ ಪ್ರೋಟೀನುಗಳ ಗುಂಪಿಗೆ ಸೇರಿದವು. ಅನೇಕ ಅಮೈನೋ ಆಮ್ಲಗಳು ಒಂದಕ್ಕೊಂದು ಅಮೈಡ್ ಬಂಧಗಳ ಮೂಲಕ ಕೂಡಿಕೊಂಡು ಪ್ರೋಟೀನುಗಳ ಸೃಷ್ಟಿಯಾಗುತ್ತದೆ. ಉಣ್ಣೆ ಮತ್ತು ರೇಷ್ಮೆಗಳೆರಡೂ ಪ್ರೋಟೀನ್ ಎಳೆಗಳೇ ಆದರೂ ಅವುಗಳ ಗುಣಗಳಲ್ಲಿ ಬಹಳ ವೈವಿಧ್ಯವಿದೆ.
ರೇಷ್ಮೆಯ ಎಳೆಗಳು ಸೂಕ್ಷ್ಮವೂ ಬಲಯುತವೂ ಆದವು. ರೇಷ್ಮೆಯ ನೂಲನ್ನು ಎಳೆದು ಎಳೆಗಳು ಒಂದೇ ದಿಕ್ಕಿನಲ್ಲಿ ನಿಲ್ಲುವಂತೆ ಮಾಡಿ ನೂಲಿನ ಶಕ್ತಿಯನ್ನು ಹೆಚ್ಚಿಸಬಹುದು. ರೇಷ್ಮೆ ಉಣ್ಣೆಗಿಂತ ಹೆಚ್ಚು ಉಷ್ಣತೆಯಲ್ಲಿ (1100 ಸೆಂ.) ಅದು ಹಳದಿಬಣ್ಣ ತಾಳುತ್ತದೆ. ಅದಕ್ಕಿಂತ ಹೆಚ್ಚಿನ ಉಷ್ಣತೆಯಲ್ಲಿ ಅಥವಾ ಅತಿನೇರಳೆ ಕಿರಣಗಳ ಸನ್ನಿಧಿಯಲ್ಲಿ ಪ್ರೋಟೀನ್ ಅಣುಗಳು ವಿಭಜನೆಗೊಳಗಾಗಿ ಎಳೆಗಳ ಅನೇಕ ಗುಣಗಳು ನಾಶವಾಗುತ್ತವೆ (ನೋಡಿ- ಉಣ್ಣೆ).

ಖನಿಜ ಮತ್ತು ಲೋಹಗಳ ಎಳೆಗಳು: ಕಲ್ನಾರು ಒಂದು ಬಗೆಯ ಖನಿಜ ಎಳೆ. ಇದು ಮೆಗ್ನೀಷಿಯಂ ಮತ್ತು ಕ್ಯಾಲ್ಸಿಯಂ ಸಿಲಿಕೇಟುಗಳ ಮಿಶ್ರಣ. ಹಲವು ಬಾರಿ ಖನಿಜದಲ್ಲಿ ಕಬ್ಬಿಣ, ಅಲ್ಯೂಮಿನಿಯಂ ಮತ್ತು ಇತರ ಲೋಹಗಳ ಅದಿರುಗಳೂ ಬೆರೆತಿರುತ್ತವೆ. ಪ್ರಕೃತಿಯಲ್ಲಿ ಎಳೆಗಳಾಗಿ ದೊರೆಯುವ ಈ ಖನಿಜ ಉಷ್ಣ ಮತ್ತು ವಿದ್ಯುತ್ ನಿರೋಧಿ. ಈಗೀಗ ಕೆಲವು ವರ್ಷಗಳಿಂದ ಉತ್ತಮ ದೆರ್ಜೆಯ ಕಲ್ನಾರಿನಿಂದ ಅಗ್ನಿ ಶಾಮಕದಳದವರು ಧರಿಸಲು ಅಗ್ನಿ ನಿರೋಧಕ ಉಡುಪುಗಳನ್ನೂ ರಂಗಸ್ಥಳ ಮತ್ತಿತ್ತರ ಎಡೆಗಳಲ್ಲಿ ಉಪಯೋಗಿಸಬಹುದಾದ ತೆರೆಗಳನ್ನು ತಯಾರಿಸುತ್ತಿದ್ದಾರೆ.

ತನ್ಯತೆ (ಡಕ್ಟಿಲಿಟಿ) ಇರುವ ಅನೇಕ ಲೋಹಗಳಿಂದ ಸೂಕ್ಷ್ಮ ಎಳೆಗಳನ್ನು ಪಡೆಯಬಹುದು. ನಮ್ಮ ದೇಶದಲ್ಲಿ ಇಂಥ ಬೆಳ್ಳಿ, ಬಂಗಾರದ ಎಳೆಗಳು ಬಹುಕಾಲದಿಂದಲೂ ಆಕರ್ಷಕ ಜರತಾರಿಯಾಗಿ ಉಪಯೋಗದಲ್ಲಿವೆ. ಇವು ಅಲಂಕಾರಕ್ಕಲ್ಲದೆ ಮತ್ತಾವ ರೀತಿಯಲ್ಲೂ ಅಷ್ಟಾಗಿ ಉಪಯೋಗಕ್ಕೆ ಬಾರವು. ಸೂಕ್ಷ್ಮ ಕಸೂತಿಗಳಲ್ಲಿ ಮಲಿನಗೊಂಡಾಗ ಇವನ್ನು ತೊಳೆದು ಶುದ್ಧೀಕರಿಸುವುದು ಕಷ್ಟದ ಕೆಲಸ. ಈ ಸಂಕಷ್ಟದಿಂದ ಪಾರಾಗಲು ಹೊಸ ವಿಧಾನಗಳನ್ನು ಯೋಜಿಸಲಾಗಿದೆ. ಲೋಹದ ತೆಳುಪದರವೊಂದನ್ನು ಅತಿ ತೆಳ್ಳಗಿನ ಪಾರದರ್ಶಕ ಮೈಲಾರ್ ಎಂಬ ಪಾಲಿ ಎಸ್ಟರ್ ಹಾಳೆಗಳ ಮಧ್ಯೆ ಇಟ್ಟು ಸೂಕ್ತ ಅಂಟೊಂದನ್ನು ಉಪಯೋಗಿಸಿ ಪ್ಲಾಸ್ಟಿಕ್ ರಕ್ಷಿತ ಲೋಹದ ಹಾಳೆಯನ್ನು ತಯಾರಿಸಲಾಗುತ್ತಿದೆ. ಈ ಹಾಳೆಗಳಿಂದ ತಯಾರಿಸಿದ ಎಳೆಗಳನ್ನು ನೇಯಲು ಉಪಯೋಗಿಸಬಹುದು ಅಲ್ಲದೆ ಬಟ್ಟೆಗಳನ್ನು ಒಗೆಯುವಾಗ ಈ ಎಳೆಗಳಿಗೆ ಏನೂ ಅಪಾಯವಾಗದು. ಇಂಥ ಸಂಕೀರ್ಣ ಲೋಹದ ಹಾಳೆಗಳಿಗೆ ಮುಖ್ಯವಾಗಿ ಅಲ್ಯೂಮಿನಿಯಂ ಲೋಹವನ್ನು ಉಪಯೋಗಿಸಲಾಗುತ್ತದೆ. ಇತರ ಲೋಹಗಳಂತೆ ಕಾಣುವ ಕೃತಕ ಜರಿಯನ್ನು ತಯಾರಿಸುವಾಗ ಉಪಯೋಗಿಸುವ ಅಂಟಿಗೆ ಬೇಕಾದ ಬಣ್ಣಗಳನ್ನು ಸರಿಯಾದ ಪ್ರಮಾಣದಲ್ಲಿ ಬೆರೆಸಲಾಗುತ್ತದೆ. ಹೀಗೆ ಮಾಡಿ ಎಲ್ಲ ಬಗೆಯ ಬಣ್ಣಗಳನ್ನುಳ್ಳ ಹೊಳೆವ ಕೃತಕ ಜರತಾರಿಗಳನ್ನು ತಯಾರಿಸಬಹುದು.
ಪರಿವರ್ತಿತ ಎಳೆಗಳು: ಸಹಜ ಸೆಲ್ಯುಲೋಸನ್ನು ಉಪಯುಕ್ತ ಎಳೆಗಳಾಗಿ ಪರಿವರ್ತಿಸಬಹುದು. ಹೀಗೆ ದೊರೆವ ಪರಿವರ್ತಿತ ಸೆಲ್ಯುಲೋಸಿನ ಎಳೆ ರೇಯಾನ್ ಎಂದೆನಿಸಿಕೊಳ್ಳುತ್ತದೆ. ರೇಯಾನ್ ತಯಾರಿಕೆಯ ವಿಧಾನಗಳಲ್ಲಿ ಪ್ರಕೃತಿಯಿಂದ ಸಂಗ್ರಹಿಸಿದ ಸೆಲ್ಯುಲೋಸನ್ನು ನಿರ್ದಿಷ್ಟ ರಾಸಾಯನಿಕ ವಸ್ತುಗಳಿಂದ ಸಂಸ್ಕರಿಸಿ ಸೆಲ್ಯುಲೋಸ್ ಒಳಗೊಂಡ ದ್ರಾವಣವನ್ನು ಪಡೆಯಲಾಗುತ್ತದೆ. ಈ ದ್ರಾವಣವನ್ನು ಸಣ್ಣ ರಂಧ್ರವೊಂದರ ಮೂಲಕ ಎಳೆದು, ಎಳೆಯುವಾಗ ಅಥವಾ ಅನಂತರ ಸೆಲ್ಯುಲೋಸ್ ಪುನ: ಘನೀಭೂತವಾಗುವಂತೆ ಮಾಡಿದರೆ ಸೆಲ್ಯುಲೋಸ್ ಎಳೆ ದೊರೆಯುತ್ತದೆ. ರೇಯಾನ್ ತಯಾರಿಕೆಗೆ ಮೂರು ಮುಖ್ಯ ವಿಧಾನಗಳಿವೆ.

ಇಂದು ಹೆಚ್ಚು ಉಪಯೋಗದಲ್ಲಿಲ್ಲದ ನೈಟ್ರೋ ಸೆಲ್ಯುಲೋಸ್ ವಿಧಾನದಲ್ಲಿ ನೂಲಲು ಯೋಗ್ಯವಲ್ಲದ ಹತ್ತಿಯನ್ನು ನೈಟ್ರಿಕ್ ಮತ್ತು ಸಲ್ಫ್ಯೂರಿಕ್ ಆಮ್ಲಗಳ ಮಿಶ್ರಣದಲ್ಲಿ ಲೀನಮಾಡಿದಾಗ ನೈಟ್ರೋ ಸೆಲ್ಯುಲೋಸ್ ದೊರೆಯುತ್ತದೆ. ಇವನ್ನು ಆಲ್ಕೊಹಾಲ್ ಈಥರ್ ಮಿಶ್ರಣಗಳಲ್ಲಿ ಲೀನಮಾಡಿ ದೊರೆಯುವ ದ್ರಾವಣವನ್ನು ತಂತುಕಗಳ ಮೂಲಕ ಹಾಯಿಸಿದಾಗ, ಲೀನಕಾರಿಗಳು ಅನಿಲಗಳಾಗಿ ನಷ್ಟವಾಗಿ ನೈಟ್ರೋಸೆಲ್ಯುಲೋಸ್ ಎಳೆ ದೊರೆಯುತ್ತದೆ. ಇದನ್ನು ಸೋಡಿಯಮ್ ಹೈಡ್ರೊ ಸಲ್ಫೈಡ್ ದ್ರಾವಣದಲ್ಲಿ ಹಾಯಿಸಿ ಸೆಲ್ಯುಲೋಸ್ ಎಳೆಗಳನ್ನು ಪಡೆಯಲಾಗುತ್ತದೆ. 

ಹೆಚ್ಚು ಬಳಕೆಯಲ್ಲಿರುವ ವಿಸ್ಕೋಸ್ ವಿಧಾನದಲ್ಲಿ, ವಸ್ತ್ರೋದ್ಯಮದಲ್ಲಿ ಉಪಯೋಗಿಸಲಾಗದೆ ಮಿಕ್ಕ ಕೀಳು ದರ್ಜೆಯ ಹತ್ತಿಯ ಭಾಗ ಮತ್ತು ಅಥವಾ ಕಾಗದದ ತಯಾರಿಕೆಯಲ್ಲಿ ಉಪಯೋಗಿಸುವಂಥ ನಾನ್ ಸೆಲ್ಯುಲೋಸ್ರಹಿತ ಮರದ ತಿಳ್ಳುಗಳನ್ನು (ವೂಡ್ ಪಲ್ಪ್‌ ಡಿವಾಯಿಡ್ ಆಫ್ ನಾನ್ ಸೆಲ್ಯುಲಾಸಿಕ್ಸ್‌) ಮೊದಲು ಕ್ಷಾರ ದ್ರಾವಣದಲ್ಲಿ ನೆನೆಸಿಟ್ಟು ಕ್ಷಾರ ಸೆಲ್ಯುಲೋಸನ್ನು ತಯಾರಿಸಲಾಗುತ್ತದೆ. ಈ ಕ್ಷಾರ ಸೆಲ್ಯುಲೋಸನ್ನು ಸಣ್ಣ ಸಣ್ಣ ತುಂಡುಗಳಾಗಿ ಮುರಿದು ನಿಯಂತ್ರಿತ ಉಷ್ಣತೆ ಮತ್ತು ಆದರ್ರ್‌ತೆಗಳ ವಾತಾವರಣದಲ್ಲಿ ಹಲವು ದಿವಸಗಳಿಟ್ಟು ಅನಂತರ ಇಂಗಾಲದ ಡೈ ಸಲ್ಫೈಡ್ ವರ್ತಿಸುವಂತೆ ಮಾಡಿದಾಗ ಸೆಲ್ಯುಲೋಸ್ ಕ್ಸಾಂಥೇಟ್ ದೊರೆಯುತ್ತದೆ. ಇದನ್ನು ಸಾರಗುಂದಿದ (ಡೈಲ್ಯೂಟ್) ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣದಲ್ಲಿ ಲೀನಮಾಡಿದಾಗ ಜೇನುತುಪ್ಪದಂತೆ ಮಂದವಾದ ವಿಸ್ಕೋಸ್ ದ್ರಾವಣ ದೊರೆಯುತ್ತದೆ. ಈ ದ್ರಾವಣವನ್ನು ತಂತುಕಗಳ ಮೂಲಕ ಸಲ್ಫ್ಯೂರಿಕ್ ಆಮ್ಲದ ಮೂಲಕ ಹಾಯಿಸಿ ದೊರೆಯುವ ಎಳೆಗಳನ್ನು, ಆಮ್ಲವನ್ನು ನಿವಾರಿಸುವುದಕ್ಕಾಗಿ ನೀರಿನ ಮೂಲಕ ಹಾಯಿಸಿದಾಗ ಶುದ್ಧ ಸೆಲ್ಯುಲೋಸ್ ಎಳೆಗಳು ದೊರೆಯುತ್ತವೆ.
ಮೂರನೆಯದಾದ ಕ್ಯುಪ್ರಮೋನಿಯಂ ವಿಧಾನದಲ್ಲಿ ಮೊದಲು ಹತ್ತಿಯ ತಿರುಳು ಮತ್ತು ಉಳಿಕೆಗಳನ್ನು (ವೇಸ್ಟ್‌) ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣದಲ್ಲಿ ಬೇಯಿಸಿ ಅನಂತರ ಚೆಲುವೆ ಕ್ರಿಯೆಗೆ ಒಳಗು ಮಾಡಿದಾಗ ದೊರೆಯುವ ತಿಳ್ಳನ್ನು (ಪಲ್ಟ್‌) ಒಣಗಿಸಲಾಗುತ್ತದೆ. ತಾಮ್ರದ ಆಕ್ಸೈಡನ್ನು ಅಮೋನಿಯ ದ್ರಾವಣದಲ್ಲಿ ಒಣತಿಳ್ಳನ್ನು ಲೀನಮಾಡಲಾಗುತ್ತದೆ. ಹೀಗೆ ದೊರೆತ ಸೆಲ್ಯುಲೋಸ್ ದ್ರಾವಣವನ್ನು ತಂತುಕಗಳ ಮೂಲಕ ಹಾಯಿಸಿದಾಗ ಉತ್ಪತ್ತಿಯಾಗುವ ಎಳೆಗಳನ್ನು ನೀರಿನಲ್ಲಿ ಹಾಯಿಸಿ ತೊಳೆದು, ಎಳೆತ ತಿರುಚುವಿಕೆಗಳಿಂದ ಬಲಪಡಿಸಿ ಅನಂತರ ಸಾರಗುಂದಿದ ಸಲ್ಫ್ಯೂರಿಕ್ ಆಮ್ಲದ ಮೂಲಕ ಹಾಯಿಸಲಾಗುತ್ತದೆ. ಹೀಗೆ ದೊರೆತ ಕ್ಯುಪ್ರಮೋನಿಯಂ ರೇಯಾನ್ ಎಳೆಗಳನ್ನು ಉತ್ತಮ ದರ್ಜೆಯ ಅತಿತೆಳ್ಳನೆಯ ವಸ್ತ್ರಗಳನ್ನು ನೇಯಲು ಉಪಯೋಗಿಸಬಹುದು.

ಅಸಿಟೇಟ್ ಎಳೆಯೆಂದು ಹೆಸರು ಪಡೆದಿರುವ ಅರ್ಧ ಕೃತಕ ಎಳೆಯಾದ ಸೆಲ್ಯುಲೋಸ್ ಅಸಿಟೇಟಿಗೆ ಸಹ ರೇಯಾನ್ ತಯಾರಿಕೆಗೆ ಬೇಕಾಗುವ ಸೆಲ್ಯುಲೋಸೇ ಆಕರ. ಹತ್ತಿಯ ಉಳಿಕೆ ಮತ್ತು ಶುದ್ಧೀಕರಿಸಿದ ಮರದ ತಿಳ್ಳುಗಳನ್ನು ನಿಯಂತ್ರಿತ ಉಷ್ಣತೆಯ ವಾತಾವರಣದಲ್ಲಿ ಅಸಿಟಿಕ್ ಆಮ್ಲದಲ್ಲಿ ಹಲವಾರು ದಿವಸಗಳವರೆಗೆ ನೆನೆಸಿಡಲಾಗುತ್ತದೆ. ಈ ಸೆಲ್ಯೂಲೋಸನ್ನು ಅಸಿಟಿಕ್ ಆನ್ ಹೈಡ್ರೈಡಿನೊಡನೆ ವರ್ತಿಸುವಂತೆ ಮಾಡಿದಾಗ ಮಂದ ದ್ರವದ ರೂಪದಲ್ಲಿ ಸೆಲ್ಯುಲೋಸ್ ಅಸಿಟೇಟ್ ದೊರೆಯುತ್ತದೆ. ಹಲವು ಕಾಲಾನಂತರ ಈ ದ್ರವವನ್ನು ನೀರಿನಲ್ಲಿ ಹಾಯಿಸಿದಾಗ ಸೆಲ್ಯೂಲೋಸ್ ಅಸಿಟೇಟ್ನ ತೆಳು ಚಕ್ಕೆ ಅಥವಾ ಹಲ್ಲೆಗಳು ದೊರೆಯುತ್ತವೆ. ಇವನ್ನು ಪುರ್ಣವಾಗಿ ಒಣಗಿಸಿ ಅನಂತರ ಅಸಿಟೋನ್ ದ್ರವದಲ್ಲಿ ಲೀನಮಾಡಿ ಲೀನಭಾಗವನ್ನು ಶೋಧಿಸಿ ಬೇರ್ಪಡಿಸಿ ದೊರೆಯುವ ಶುದ್ಧ ಬಿಳಿಯ ಮರದ ದ್ರಾವಣವನ್ನು ತಂತುಕಗಳ ಮೂಲಕ ಬಿಸಿಗಾಳಿಯ ವಾತಾವರಣಕ್ಕೆ ಹೊರತಳ್ಳಲಾಗುತ್ತದೆ. ಅಲ್ಲಿ ಅಸಿಟೋನ್ ಹವೆಯಾಗಿ ನಷ್ಟವಾಗಿ ಹೊಳೆಯುವ ಸೆಲ್ಯುಲೋಸ್ ಅಸಿಟೇಟಿನ ಎಳೆಗಳು ದೊರೆಯುತ್ತವೆ. ಬಹುವಾದ ಹೊಳಪು ಬೇಡವಾಗಿದ್ದರೆ, ತಂತುಕಗಳ ಮೂಲಕ ಹಾಯಿಸುವ ಮೊದಲು ದ್ರಾವಣಕ್ಕೆ ಟೈಟಾನಿಯಂ ಆಕ್ಸೈಡ್ ಸೇರಿಸಲಾಗುತ್ತದೆ.

ಅಸಿಟೇಟ್ ಎಳೆಗಳು ಪುರ್ಣ ಕೃತಕ ಮತ್ತು ಪರಿವರ್ತಿತ ಎಳೆಗಳಿಗೆ ಮಧ್ಯಮ ಬಗೆಯವು. ಗುಣಲಕ್ಷಣಗಳಲ್ಲಿ ಅಸಿಟೇಟ್ ಎಳೆಗಳು ಬಲುಮಟ್ಟಿಗೆ ಕೃತಕ ಎಳೆಗಳನ್ನು ಹೋಲುತ್ತವೆ. ಉಷ್ಣ ಪ್ರಯೋಗದಿಂದ ಈ ಬಟ್ಟೆಗಳು ಮೆದುವಾಗುತ್ತವೆ. ಹೀಗೆ ಆದಾಗ ಒತ್ತಡವನ್ನು ಒದಗಿಸುವುದರಿಂದ ಅವುಗಳಿಗೆ ಬೇಕಾದ ಆಕಾರ ಕೊಡಬಹುದು. ಈ ಉಷ್ಣಸುನಮ್ಯತಾ (ಥರ್ಮೋಪ್ಲಾಸ್ಟಿಸಿಟಿ) ಗುಣ ಉಡುಪುಗಳಲ್ಲಿ ಬಲು ಉಪಯುಕ್ತ. ಬಟ್ಟೆಗಳ ಮೇಲೆ ಉಷ್ಣ ಉಬ್ಬಚ್ಚಿನಿಂದ (ಹೀಟ್ ಎಂಬಾಸ್ಸಿಂಗ್) ಚಿತ್ರ, ನಕ್ಷೆಗಳನ್ನು ಮೂಡಿಸಬಹುದು. ಮಡಿಕೆಗಳು ಮತ್ತು ನೆರಿಗೆಗಳು ಉಷ್ಣ ಪ್ರಯೋಗ ಮತ್ತು ಒತ್ತಡಗಳಿಂದ ಶಾಶ್ವತವಾಗಿ ಉಳಿಯುವಂತೆ ಮಾಡಬಹುದು. ಹಲವು ರಾಸಾಯನಿಕ ಸಂಸ್ಕರಣಗಳಿಂದ ಅಸಿಟೇಟ್ ವಸ್ತ್ರಗಳಿಗೆ ಜಲವಿಕರ್ಷಣ (ವಾಟರ್ ರಿಪೆಲ್ಲೆಂಟ್) ಶಕ್ತಿಯನ್ನು ನೀಡಬಹುದು. ಇಂಥ ಜಲವಿಕರ್ಷಕ ಬಟ್ಟೆಗಳನ್ನು ಮಳೆಯಲ್ಲಿ ಧರಿಸುವ ಉಡುಪುಗಳ ತಯಾರಿಕೆಯಲ್ಲಿ ಉಪಯೋಗಿಸಬಹುದು.
ಕೃತಕ ಎಳೆಗಳು: ಇಂದು ಮಾರುಕಟ್ಟೆಯಲ್ಲಿ ಸುಮಾರು ಅರುವತ್ತು ಬಗೆಯ ಕೃತಕ ಎಳೆಗಳು ಇವೆ. ಮುಂದಿನ ಕೆಲವು ವರ್ಷಗಳಲ್ಲಿ ಇನ್ನೂ ಹಲವನ್ನು ನಿರೀಕ್ಷಿಸ ಬಹುದು. ಎಲ್ಲ ಕೃತಕ ಎಳೆಗಳೂ ವಿವಿಧ ಬಗೆಯ ಪಾಲಿಮರುಗಳಾಗಿದ್ದು (ಬಹ್ವಂಗಗಳು) ರಾಸಾಯನಿಕವಾಗಿ ಎಲ್ಲ ವಿಧಗಳಲ್ಲಿಯೂ ಪ್ಲಾಸ್ಟಿಕುಗಳೆಂದು ಪರಿಗಣಿಸಬಹುದು. ನೈಸರ್ಗಿಕ ಎಳೆಗಳಲ್ಲಿರುವಂತೆಯೆ, ಸರಳ ಸಂಯುಕ್ತಗಳ ಅನೇಕ ಅಣುಗಳು ಸರಪಳಿ ಯಂತೆ ಪರಸ್ಪರ ಕೂಡಿಕೊಂಡು ಎಳೆಗಳ ಸರಪಳಿ ಪಾಲಿಮರುಗಳಾಗುತ್ತವೆ. ರಚನೆಯಲ್ಲಿ ಹೋಲಿಕೆಗಳನ್ನು ತೋರಿಸಲು ಕೆಲವು ನೈಸರ್ಗಿಕ ಮತ್ತು ಕೃತಕ ಎಳೆಗಳ ರಾಸಾಯನಿಕ ರಚನೆಗಳನ್ನು ಸ್ಥೂಲವಾಗಿ ಮುಂದೆ ತೋರಿಸಿದೆ.

ಗ್ಲೂಕೋಸ್ + ಗ್ಲೂಕೋಸ್ ಸೆಲ್ಲೋಬಂiೆÆೕಸ್ (ಅಃ) 
-(ಅಃ)-(ಅಃ) -(ಅಃ)-(ಅಃ)-ಹತ್ತಿ ಮತ್ತು ರೇಯಾನ್ ಎಳೆಗಳು
ಖ-ಅಔಓಊ-ಖ- ಖ-ಅಔಓಊ-ಖ- ಖ-ಅಔಓಊ-ಖ-ಉಣ್ಣೆ ಮತ್ತು ರೇಷ್ಮೆಯ ಎಳೆಗಳು
ಊಔಔಅ-ಖ-ಅಔಓಊ- ಖ-ಓಊಅಔ- ಖ-ಅಔಓಊ-ನೈಲಾನ್ ಎಳೆ
ಊಔಔಅ-ಖ-ಅಔಔ-ಖ-ಔಅಔ-ಖ-ಅಔಔ-ಖ-ಔಅಔ-ಪಾಲಿ ಎಸ್ಟರ್ ಎಳೆ
ನಮಗೆ ಈ ವರೆಗೆ ತಿಳಿದಿರುವ ಎಲ್ಲ ಕೃತಕ ಎಳೆಗಳ ವಿಚಾರವನ್ನೂ ಪುರ್ಣವಾಗಿ ಇಲ್ಲಿ ವಿವರಿಸಲು ಸಾಧ್ಯವಿಲ್ಲ. ಹಲವು ಮುಖ್ಯ ಮತ್ತು ಪರಿಚಿತ ಎಳೆಗಳನ್ನು ಮಾತ್ರ ಮುಂದೆ ವಿವೇಚಿಸಲಾಗಿದೆ.-
ನೈಲಾನ್: ಕೃತಕ ಎಳೆಗಳಲ್ಲಿ ಮೊಟ್ಟ ಮೊದಲನೆಯದು. ಇದನ್ನು ಮೊದಲ ಬಾರಿಗೆ ಅಮೆರಿಕದ ಡು ಪಾಂಟ್ ಕಂಪನಿ ತಯಾರಿಸಿತು. ರೇಷ್ಮೆ ಮತ್ತು ಉಣ್ಣೆಗಳಂತೆ ನೈಲಾನ್ ಸಹ ಪಾಲಿ ಅಮೈಡ್ ಎಂದರೆ ಅನೇಕ ಅಮೈಡ್ ಪುಂಜಗಳು ಕೂಡಿ ಆಗಿದೆ. ರೇಷ್ಮೆ ಅಥವಾ ಉಣ್ಣೆಗಳ ಎಳೆಗಳು ಪ್ರೋಟೀನುಗಳಾಗಿದ್ದು ಅವುಗಳ ಸರಳ ಘಟಕಗಳು (ಸಿಂಪಲ್ ಯೂನಿಟ್ಸ್‌) ಅಮೈನೋ ಆಮ್ಲಗಳು. ಆದರೆ ನೈಲಾನ್ ಎಳೆಗಳು ದ್ವಿಪ್ರತ್ಯಾಮ್ಲೀಯ ಆಮ್ಲ (ಡೈಬೇಸಿಕ್ ಆಸಿಡ್) ಮತ್ತು ದ್ವಿಯಾಮ್ಲೀಯ (ಡೈಆಸಿಡಿಕ್) ಅಮೈನ್ ಅಣುಗಳ, ಮುಂದೆ ತೋರಿಸಿರುವ ಸಂಯೋಜನೆಯಂಥ ಅನಂತ ಸಂಯೋಜನೆಗಳಿಂದ ಆಗಿವೆ.
ಊಔಔಅ - ಖ-ಅಔಔಊ + ಊ2ಓ-ಖ’- ಓಊ2 + ಊಔಔಅ - ಖ - ಅಔಔಊ
                    ಲ ಊಔಔಅ - ಖ - ಅಔಓಊ - ಖ’ - ಓಊಅಔ - ಖ - ಅಔಔಊ

ಅಡಿಪಿಕ್ ಆಮ್ಲ ಮತ್ತು ಹೆಕ್ಸ್‌ ಮೆಥಿಲೀನ್ ಡೈ ಅಮೈನುಗಳು ಒಂದರೊಡನೊಂದು ಸರಳ ರೀತಿಯಲ್ಲಿ ವರ್ತಿಸಿದಾಗ ದೊರೆಯುವುದು ಅಮೈಡ್ ನೈಲಾನ್ ಲವಣ. ನೈಲಾನ್ ಲವಣವನ್ನು ನೀರಿನಲ್ಲಿ ಲೀನಮಾಡಿ ದ್ರಾವಣವನ್ನು ಸಾಂದ್ರೀಕರಿಸಿ ಸಾರ (ಕಾನ್ಸೆಂಟ್ರೇಟೆಡ್) ದ್ರಾವಣವನ್ನು ಉಷ್ಣ ಮತ್ತು ಒತ್ತಡಗಳಿಗೆ ಒಳಪಡಿಸಿದಾಗ ನೈಲಾನ್ ಲವಣದ ಅಣುಗಳು ಒಂದರೊಡನೊಂದು ಸೇರಿ ಸರಪಳಿ ಪಾಲಿಮರಿನ ಬೃಹದಣುಗಳಾಗುತ್ತವೆ. ಹೀಗೆ ದೊರೆತ ಪಾಲಿಮರ್ ಅಥವಾ ಪ್ಲಾಸ್ಟಿಕನ್ನು ಉಷ್ಣದಿಂದ ಮೆದುವಾಗುವಂತೆ ಮಾಡಿ ನೀಳು ಗಂಡಿಗಳ ಮೂಲಕ ನೀರಿನ ತುಂತುರಿಗೆ ಎದುರಾಗಿ ಹೊರಚಲ್ಲುವಂತೆ ಮಾಡಲಾಗುತ್ತದೆ. ಆಗ ನೈಲಾನ್ ಪುನ: ಘನರೂಪಕ್ಕೆ ತಿರುಗುತ್ತದೆ. ಹೀಗೆ ದೊರೆತ ಪಟ್ಟಿಗಳ ರೂಪದಲ್ಲಿರುವ ನೈಲಾನನ್ನು ಯಂತ್ರಗಳಿಂದ ಚೆಕ್ಕೆ ಚೆಕ್ಕೆಗಳಾಗಿ ಕತ್ತರಿಸಲಾಗುತ್ತದೆ.

ಚೆಕ್ಕೆ ನೈಲಾನನ್ನು ಉಷ್ಣದಿಂದ ಕರಗಿಸಿ ದ್ರವ ನೈಲಾನನ್ನು ತಂತುಕಗಳಲ್ಲಿ ಹಾಯಿಸಿದಾಗ ಬಲು ಸೂಕ್ಷ್ಮವಾದ ನೈಲಾನ್ ಎಳೆಗಳು ದೊರೆಯುತ್ತವೆ. ಈ ಬಗೆಯ ಹಲವಾರು ಎಳೆಗಳನ್ನು ಕೂಡಿಸಿ ತಿರುಚಿದಾಗ ನೈಲಾನ್ ನೂಲು ದೊರೆಯುತ್ತದೆ. ಈ ನೂಲಿನಲ್ಲಿ ನೈಲಾನ್ ಅಣುಗಳು ಏಕಮುಖವಾಗಿ ಇರುವುದಿಲ್ಲವಾದ್ದರಿಂದ ನೂಲಿನ ಬಲ ಬಲು ಕಡಿಮೆ. ಎಳೆತದಿಂದ ಅಣುಗಳು ಏಕಮುಖವಾಗುವಂತೆ ಮಾಡಿ ನೂಲಿನ ಬಲವನ್ನು ಹೆಚ್ಚಿಸಬಹುದು. ಹೀಗೆ ಮಾಡಿದಾಗ ನೈಲಾನಿಗೆ ಹೊಳಪು ಮತ್ತು ಪಾರದರ್ಶಕತ್ವವೂ ದೊರೆಯುತ್ತವೆ.
ನೈಲಾನ್ ಉಷ್ಣಸುನಮ್ಯ (ಥರ್ಮೋಪ್ಲಾಸ್ಟಿಕ್). ಇದರ ಅರ್ಥ ಉಷ್ಣವನ್ನು ಒದಗಿಸಿದಾಗ ನೈಲಾನ ಮೆದುವಾಗುತ್ತದೆ. ಆದ್ದರಿಂದ ಉಷ್ಣ ಉಬ್ಬಚ್ಚಿನಿಂದ ಬಟ್ಟೆಗಳ ಮೇಲೆ ಚಿತ್ರ, ನಕ್ಷೆಗಳನ್ನು ಮೂಡಿಸಬಹುದು; ಮತ್ತು ಆವಶ್ಯಕವಾದ ಮಡಿಕೆ ಆಕಾರಗಳು ಶಾಶ್ವತವಾಗಿ ಉಳಿಯುವಂತೆ ಮಾಡಬಹುದು. ವಿಶಿಷ್ಟ ಸಂಸ್ಕರಣಗಳಿಂದ ನೈಲಾನ ಬಟ್ಟೆಗೆ ಜಲವಿಕರ್ಷಣ ಶಕ್ತಿಯನ್ನೂ ನೀಡಬಹುದು. ನೈಲಾನನ್ನು ಕೇವಲ ಉಡುಪುಗಳಿಗೆ ಮಾತ್ರವೇ ಉಪಯೋಗಿಸುತ್ತಿಲ್ಲ. ವಿಶಿಷ್ಟ ರೀತಿಯ ಬಲು ಬಲಯುತವಾದ ನೈಲಾನನ್ನು ಟೈರುಗಳಲ್ಲಿ ಒಳಹೊದಿಕೆಗಾಗಿ ಅಧಿಕ ಪ್ರಮಾಣದಲ್ಲಿ ಉಪಯೋಗಿಸಲಾಗುತ್ತದೆ.

ಪಾಲಿ ಎಸ್ಟರು: ಟೆರಿಲೀನ್, ಟೆರೀನ್, ಡೆಕ್ರಾನ ಮೊದಲಾಗಿ ಹಲವು ಹೆಸರುಗಳಿಂದ ಪರಿಚಿತವಾಗಿರುವ ಈ ಎಳೆಯನ್ನು ಮೊದಲ ಬಾರಿಗೆ ತಯಾರಿಸಿದ ಕೀರ್ತಿ ಇಂಗ್ಲೆಂಡಿನ ಇಂಪೀರಿಯಲ್ ಕೆಮಿಕಲ್ ಇಂಡಸ್ತ್ರೀಸ್ ಸಂಸ್ಥೆಗೆ ಸಲ್ಲುತ್ತದೆ. ಹೆಸರೇ ತಿಳಿಸುವಂತೆ ಅನೇಕ ಎಸ್ಟರ್ ಪುಂಜಗಳನ್ನುಳ್ಳ ಬೃಹದಣುಗಳ ಸರಪಳಿ ಪಾಲಿಮರ್ ಪಾಲಿಎಸ್ಟರ್.
ಟೆರಿಫ್ರಾಲಿಕ್ ಆಮ್ಲ ಮತ್ತು ಎಥಿಲೀನ್ ಗ್ಲೈಕಾಲುಗಳನ್ನು ಆಮ್ಲ ವೇಗ ವರ್ಧಕವೊಂದರ ಸನ್ನಿಧಿಯಲ್ಲಿ ಉಷ್ಣಕ್ಕೆ ಒಳಗುಮಾಡಿದಾಗ ಪಾಲಿಎಸ್ಟರ್ ಪಿಂಗಾಣಿಯಂಥ ಗಡುತರವಾದ ಘನವಸ್ತುವಿನ ರೂಪದಲ್ಲಿ ದೊರೆಯುತ್ತದೆ. ಹೀಗೆ ದೊರೆತ ಕರಡು ಪಾಲಿ ಎಸ್ಟರನ್ನು ಉಷ್ಣದಿಂದ ಕರಗಿಸಿ ಮೆದುಮಾಡಿ ತಂತುಕಗಳ ರಂಧ್ರಗಳ ಮೂಲಕ ಹಾಯಿಸಿದಾಗ ಸೂಕ್ಷ್ಮವಾದ ಪಾಲಿಎಸ್ಟರ್ ಎಳೆಗಳು ದೊರೆಯುತ್ತವೆ. ಈ ರೀತಿ ದೊರೆತ ಎಳೆಗಳಲ್ಲಿ ಅಣುಗಳು ಏಕಮುಖವಾಗಲು ಎಳೆಗಳನ್ನು ಎಳೆತಕ್ಕೆ ಒಳಪಡಿಸಿ ಅವುಗಳ ಬಲವೃದ್ಧಿ ಮಾಡಬಹುದು. ಹೀಗೆ ಬಲಯುತವಾದ ಪಾಲಿಎಸ್ಟರ್ ಬಹಳ ಬಾಳಿಕೆ ಬರುತ್ತದೆ. ಪಾಲಿಎಸ್ಟರ್ ಬಟ್ಟೆಯಲ್ಲಿ ಕಲ್ಮಷ, ದೂಳು ಮೊದಲಾದುವುಗಳು ಸುಲಭವಾಗಿ ಸೇರುವುದಿಲ್ಲವಾದ್ದರಿಂದ ಇದನ್ನು ಒಗೆಯುವುದು ಬಹು ಸುಲಭ. ಸೂಕ್ಷ್ಮ ಎಳೆಗಳ ಹೊಳಪು ಸಾಕಷ್ಟಿದ್ದು ಉಷ್ಣ ಸುನಮ್ಯತೆಯನ್ನೂ ಪಡೆದಿರುವುದರಿಂದ ಪಾಲಿಎಸ್ಟರ್ ಬಹು ಜನಪ್ರಿಯತೆಯನ್ನು ಗಳಿಸಿದೆ.
ಅಕ್ರಿಲಿಕ್ ಎಳೆಗಳು: ಆರ್ಲಾನ್ ಮತ್ತು ಅಕ್ರಿಲಾನುಗಳೆರಡೂ ಪಾಲಿ ಅಕ್ರಿಲೋ ನೈಟ್ರಿಲ್ ಬೃಹದಣುಗಳ ಸರಪಳಿ ಪಾಲಿಮರುಗಳಿಂದ ಕೂಡಿ ಆದ ಎಳೆಗಳು. ಎಥಿಲೀನ್ ಮೂಲ ಸಂಯುಕ್ತದಿಂದ ತಯಾರಿಸಲಾದ ಅಕ್ರಿಲೋ ನೈಟ್ರಿಲನ್ನು ಪಾಲಿಮರೈಸೇಷನ್ ಕ್ರಿಯೆಗೆ ಒಳಪಡಿಸಿದಾಗ ಪಾಲಿ ಅಕ್ರಿಲೋ ನೈಟ್ರಿಲ್ ಘನರೂಪದಲ್ಲಿ ದೊರೆಯುತ್ತದೆ. ಕರಡು ಅಕ್ರಿಲೋ ನೈಟ್ರಿಲನ್ನು ಸೂಕ್ತ ಲೀನಕಾರಿಯೊಂದರಲ್ಲಿ ಲೀನಮಾಡಿ ದೊರೆತ ದ್ರಾವಣವನ್ನು ತಂತುಕಗಳ ಮೂಲಕ ಹಾಯಿಸಿ ಸೂಕ್ಷ್ಮ ಎಳೆಗಳನ್ನು ಪಡೆಯಲಾಗುತ್ತದೆ. ಈ ಬಗೆಯ ಎಳೆಗಳನ್ನೂ ಎಳೆತಕ್ಕೊಳಪಡಿಸಿ ಅಣುಗಳು ಏಕಮುಖವಾಗುವಂತೆ ಮಾಡಿ ಎಳೆಗಳು ಬಲಯುತವಾಗುವಂತೆ ಮಾಡಲಾಗುತ್ತದೆ.

ಈ ಎಳೆಗಳು ಬಲು ಉಷ್ಣಸುನಮ್ಯತೆಯನ್ನು ಪಡೆದಿರುವುದರಿಂದ ಮಡಿಕೆ. ನೆರಿಗೆಗಳು ಶಾಶ್ವತವಾಗಿ ಉಳಿಯುವಂತೆ ಮಾಡಬಹುದು. ಮತ್ತು ಉಷ್ಣ ಉಬ್ಬಚ್ಚಿನ ಮೂಲಕ ಚಿತ್ರ ನಕಾಶೆಗಳನ್ನು ಮೂಡಿಸಬಹುದು. ನಿರ್ದಿಷ್ಟ ರಾಸಾಯನಿಕ ಸಂಸ್ಕರಣಗಳಿಂದ ಈ ಬಗೆಯ ಬಟ್ಟೆಗಳಿಗೆ ಜಲವಿಕರ್ಷಣ ಶಕ್ತಿಯನ್ನು ನೀಡಬಹುದಾದ್ದ ರಿಂದ ಅಧಿಕ ಪ್ರಮಾಣದಲ್ಲಿ ಇವನ್ನು ಮಳೆಯುಡುಪುಗಳನ್ನು ತಯಾರಿಸಲು ಉಪಯೋಗಿಸಲಾಗುತ್ತಿದೆ.

ಇತರ ಅಕ್ರಿಲಿಕ್ ಎಳೆಗಳಲ್ಲಿ ವೆರೆಲ್ ಮತ್ತು ಕ್ರೆಸ್ಲಾನುಗಳನ್ನು ಹೆಸರಿಸಬಹುದು. ಡೊ ಕೆಮಿಕಲ್ ಕಂಪನಿ ತಯಾರಿಸಿರುವ ಜೆಫ್ರಾನ್ ಅಕ್ರಿಲೊ ನೈಟ್ರಿಲ್ ಮತ್ತು ಇನ್ನು ಹಲವು ಪಾಲಿಮರುಗಳು ಕೂಡಿ ಆದ ಮಿಶ್ರ ಎಳೆ. ಇದನ್ನು ಸುಧಾರಿತ ಅಕ್ರಿಲಿಕ್ ಎಳೆ ಎಂದೆನ್ನಬಹುದು. ಅಕ್ರಿಲಿಕ್ ಎಳೆಗಳಿಗೆ ಬಣ್ಣ ಕೊಡುವುದು ಕಷ್ಟ. ಆದರೆ ಸುಧಾರಿತ ಅಕ್ರಿಲಿಕ್ ಆದ ಜೆಫ್ರಾನ್ ಸುಲಭವಾಗಿ ಬಣ್ಣ ತಳೆಯುತ್ತದೆ. ಜೆಫ್ರಾನ್ ಸಹ ಇತರ ಅನೇಕ ಕೃತಕ ಎಳೆಗಳಂತೆ ಉಷ್ಣ ಸುನಮ್ಯ. ಆದ್ದರಿಂದ ಮಡಿಕೆ. ನೆರಿಗೆಗಳನ್ನು ಶಾಶ್ವತವಾಗ ತಳೆಯಬಹುದು. ಈ ಎಳೆ ತಕ್ಕಮಟ್ಟಿಗೆ ನೀರನ್ನೂ ಹೀರಿಕೊಳ್ಳಬಲ್ಲುದು.

ಡಾರ್ವಾನ್: ವಿನೈಲಿಡೀನ್ ಡೈ ನೈಟ್ರೈಲ್ ಅಣುಗಳಿಂದಾದ ಪಾಲಿಮರ್ ಎಳೆ ಡಾರ್ವಾನ್. ಇದನ್ನು ತಯಾರಿಸಲು ಬೇಕಾಗುವ ಮೂಲ ಸಂಯುಕ್ತವಾದ ಅಸಿಟಾಕ್ಸಿ ಡೈ ಸಯನೋ ಈಥೇನನ್ನು ಹೈಡ್ರೋಜನ್ನ ಸಯನೈಡ್ ಮತ್ತು ಅಸಿಟಿಕ್ ಆನ್ ಹೈಡ್ರೈಡುಗಳ ಸಂಯೋಜನೆಯಿಂದ ಪಡೆಯಲಾಗುತ್ತದೆ. ಅಸಿಟಾಕ್ಸಿ ಡೈ ಸಯನೋ ಈಥೇನನ್ನು ನಿರ್ದಿಷ್ಟ ರೀತಿಯಲ್ಲಿ ಉಷ್ಣಕ್ಕೆ ಒಳಪಡಿಸಿದಾಗ ವೀನೈಲಿಡೀನ್ ಡೈ ನೈಟ್ರೈಲ್ ದೊರೆಯುತ್ತದೆ. ಇದನ್ನು ವೀನೈಲ್ ಅಸಿಟೇಟಿನೊಡನೆ ಪಾಲಿಮರೈಸೇಷನ್ ಕ್ರಿಯೆಗೆ ಒಳಪಡಿಸಿದಾಗ ದೊರೆಯುವ ಸಹ ಪಾಲಿಮರನ್ನು (ಕೊ-ಪಾಲಿಮರ್) ಸೂಕ್ಷ್ಮ ಲೀನಕಾರಿಯೊಂದರಲ್ಲಿ ಲೀನಮಾಡಿ ದ್ರಾವಣವನ್ನು ತಂತುಕಗಳ ಮೂಲಕ ಹಾಯಿಸಿ ಡಾರ್ವಾನ್ ಎಳೆಗಳನ್ನು ಪಡೆಯಲಾಗುತ್ತದೆ. ಡಾರ್ವಾನ್ ಸಹ ಉಷ್ಣಸುನಮ್ಯ ಎಳೆ. ಉಣ್ಣೆಯ ಎಳೆಗಳಂತೆ ಇರುವ ದಪ್ಪ ಡಾರ್ವಾನ್ ಎಳೆಗಳನ್ನು ತಯಾರಿಸಬಹುದಾದ್ದರಿಂದ ಇವನ್ನು ಉಣ್ಣೆಗೆ ಬದಲಾಗಿ ಹಲವು ಎಡೆಗಳಲ್ಲಿ ಉಪಯೋಗಿಸಬಹುದು.

ಎಳೆ ಗಾಜು (ಫೈಬರ್ ಗ್ಲಾಸ್): ಸಾಮಾನ್ಯವಾಗಿ ನಾವು ನೋಡುವ ಗಾಜು ಗಡಸು ಮತ್ತು ಬಗ್ಗಿಸಲಾರದಂತಹುದು. ಆದರೆ ಗಾಜಿನಿಂದ ಸೂಕ್ಷ್ಮ ಎಳೆಗಳನ್ನು ತಯಾರಿಸಿ ಉತ್ತಮ ಪಾರದರ್ಶಕ ಮತ್ತು ಅಪಾರದರ್ಶಕ ಬಟ್ಟೆಗಳನ್ನು ತಯಾರಿಸಬಹುದು. ಸೂಕ್ಷ್ಮ ಪರೀಕ್ಷೆ ಮಾಡದೆ ಗಾಜಿನೆಳೆಯ ಬಟ್ಟೆ ಮತ್ತು ರೇಷ್ಮೆಯ ಬಟ್ಟೆಗಳಿಗಿರುವ ವ್ಯತ್ಯಾಸವನ್ನು ಕಂಡುಹಿಡಿಯುವುದು ಕಷ್ಟ. ರೇಷ್ಮೆಯ ಎಳೆಗಳೊಡನೆ ಬೆರೆತ ಗಾಜಿನೆಳೆಯ ವಸ್ತ್ರವನ್ನು ಮೊದಲಬಾರಿಗೆ ಸುಮಾರು ಎಂಬತ್ತು ವರ್ಷಗಳ ಹಿಂದೆಯೇ ತಯಾರಿಸಲಾಗಿದ್ದರೂ ಈ ಬಟ್ಟೆ ಗಡುಸಾಗಿದ್ದು, ಮಡಚಿಡಲು ಸಹ ಸಾಧ್ಯವಾಗುತ್ತಿರಲಿಲ್ಲವಾದ್ದರಿಂದ ವಸ್ತ್ರೋದ್ಯಮದಲ್ಲಿ ಆಗಲೇ ಗಾಜು ಕಾಲಿಡಲು ಸಾಧ್ಯವಾಗಲಿಲ್ಲ. ಆದರೂ ಪ್ರಯೋಗಗಳು ಮುಂದುವರಿದು ಒಂದನೆಯ ಮಹಾಯುದ್ಧದ ವೇಳೆಯಲ್ಲಿ ಕಲ್ನಾರಿನ ಅಭಾವದಿಂದ ಪಾರಾಗಲು ಜರ್ಮನಿಯಲ್ಲಿ ಗಾಜಿನೆಳೆಗಳನ್ನು ಉಷ್ಣ ನಿರೋಧಕ, ವಿದ್ಯುನ್ನಿರೋಧಕಗಳಾಗಿ ಕಲ್ನಾರಿಗೆ ಬದಲಾಗಿ ಉಪಯೋಗಿಸಲು ಸಾಧ್ಯವಾಯಿತು. ಇಂದಿನ ಸೂಕ್ಷ್ಮ, ಮೃದು ಮತ್ತು ಹೇಗೆ ಬೇಕಾದರೂ ಬಗ್ಗಿಸಲಾಗುವ ವಸ್ರ್ತೋದ್ಯಮದಲ್ಲಿ ಉಪಯೋಗಿಸಲಾಗುವಂಥ ಎಳೆಯನ್ನು ಅಲ್ಪ ವೆಚ್ಚದಲ್ಲಿ ಮೊದಲ ಬಾರಿಗೆ 1931ರಲ್ಲಿ ಅಮೆರಿಕದ ಓವೆನ್ಸ್‌-ಎಲಿನಾಯ್ಸ್‌ ಗ್ಲಾಸ್ ಕಂಪನಿಯಲ್ಲಿ ತಯಾರಿಸಲಾಯಿತು. 1938ರಲ್ಲಿ ಈ ಬಗೆಯ ಗಾಜಿನೆಳೆ ವಸ್ತ್ರೋದ್ಯಮದಲ್ಲಿ ಕಾಲಿಟ್ಟಿತು.
ಗಾಜಿನೆಳೆಯ ತಯಾರಿಕೆಗೆ ವಿಶಿಷ್ಟ ರೀತಿಯ ಗಾಜು ಅಗತ್ಯ. ಸಿಲಿಕ (ಮರಳು), ಸುಣ್ಣಕಲ್ಲು, ಸೋಡಿಯಂ ಕಾರ್ಬೊನೇಟ್ ಮತ್ತು ಬೋರಾಕ್ಸುಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಬೆರೆಸಿ ಅತಿ ನಿಖರ ನಿಯಂತ್ರಣವುಳ್ಳ ಕುಲುಮೆಗಳಲ್ಲಿ 13700 ಸೆಂ. ಉಷ್ಣತೆಯಲ್ಲಿ ಕಾಯಿಸಿದಾಗ ಈ ವಿಶಿಷ್ಟ ರೀತಿಯ ಗಾಜು ದೊರೆಯುತ್ತದೆ. ಇದರಿಂದ ಸಣ್ಣ ಗೋಲಿಗಳನ್ನು ಮಾಡಿ ಪರೀಕ್ಷಿಸಿದ ಮೇಲೆ ಇವನ್ನು ಪುನ: ಸಣ್ಣ ಕುಲುಮೆಗಳಲ್ಲಿ ಕಾಯಿಸಿ ವಿಶಿಷ್ಟ ರೀತಿಯ ತಂತುಕಗಳ ಮೂಲಕ ಹಾಯಿಸಿ ಗಾಜಿನೆಳೆಗಳನ್ನು ಪಡೆಯಲಾಗುತ್ತದೆ. ಒಂದೊಂದು ತಂತುಕದಲ್ಲಿಯೂ ಸುಮಾರು 200 ಸೂಕ್ಷ್ಮವಾದ ರಂಧ್ರಗಳಿರುತ್ತವೆ. ಇವುಗಳಿಂದ ಬರುವ ಸೂಕ್ಷ್ಮ ಎಳೆಗಳನ್ನು ಕೂಡಲೇ ಅತಿವೇಗದಿಂದ ಒಟ್ಟಾಗಿ ಎಳೆತಕ್ಕೊಳಪಡಿಸಿದಾಗ ಅವುಗಳ ದಪ್ಪ ಕಡಿಮೆಯಾಗಿ ಬಲ ವೃದ್ಧಿಯಾಗುತ್ತದೆ. ಅನಂತರ ಹಲವು ಎಳೆಗಳನ್ನು ಒಟ್ಟಾಗಿ ತಿರುಚಿ ನೂಲು ತಯಾರಿಸಲಾಗುತ್ತದೆ. ಈ ನೂಲನ್ನು ಬಾಗಿಲ ತೆರೆ, ರಂಗಸ್ಥಳ ತೆರೆಗಳನ್ನು ನೇಯಲು ಉಪಯೋಗಿಸಬಹುದು.

ಮತ್ತೊಂದು ವಿಧಾನದಲ್ಲಿ ತಂತುಕದಿಂದ ಹೊರಬಂದ ಗಾಜಿನೆಳೆಗಳಿಗೆ ಎದುರಾಗಿ ಗಾಳಿಯ ಪ್ರವಾಹವನ್ನೇರ್ಪಡಿಸುವುದರಿಂದ ಗಾಜು 8"-15" ಉದ್ದದ ಸೂಕ್ಷ್ಮ ಎಳೆಗಳಾಗಿ ಮಾರ್ಪಡುತ್ತದೆ. ಈ ಸೂಕ್ಷ್ಮ ಎಳೆಗಳು ಮೊದಲು ಘರ್ಷಣ ನಿರೋಧಕವೊಂದರ ತುಂತುರು ಮತ್ತು ಅನಂತರ ಹದವಾದ ಬೆಂಕಿಯಲ್ಲಿ ಹಾದು ತಿರುಗುತ್ತಿರುವ ಪೀಪಾಯಿ ಒಂದರ ಮೇಲೆ ಬಿದ್ದು ಹತ್ತಿಯಂತೆ ಮೃದುವಾದ ಬಲೆಯಾಗಿ ಮಾರ್ಪಡುತ್ತವೆ. ಹತ್ತಿಯಂಥ ಈ ಎಳೆಗಳ ಸಮೂಹವನ್ನು ಒಟ್ಟುಗೂಡಿಸಿ ನೈಸರ್ಗಿಕ ಎಳೆಗಳನ್ನು ನೂಲುವಂತೆಯೇ ನೂತು ಎಳೆಗಳನ್ನು ತಯಾರಿಸಲಾಗುತ್ತದೆ. 

ಗಾಜಿನ ಎಳೆಗಳಿಂದ ತಯಾರಾದ ಬಟ್ಟೆಯನ್ನು ಬಲಗೊಳಿಸಲು ಅಧಿಕ ಉಷ್ಣಕ್ಕೆ ಅದನ್ನು ಒಳಪಡಿಸಬೇಕು. ಈ ವಸ್ತ್ರಕ್ಕೆ ವಿಶಿಷ್ಟ ರೀತಿಯ ಬಣ್ಣಗಳನ್ನು ಕೊಡಬಹುದು; ಮತ್ತು ಘರ್ಷಣರಕ್ಷಣ ಲೇಪಗಳನ್ನು ಕೊಡಬಹುದು. ಸೂಕ್ತ ಲೇಪಗಳಿಂದ ವಸ್ತ್ರದ ಇತರ ಗುಣಗಳನ್ನೂ ಬೇಕಾದಂತೆ ತಕ್ಕಮಟ್ಟಿಗೆ ಮಾರ್ಪಡಿಸಬಹುದು.
ಗಾಜಿನ ಎಳೆಯ ವಸ್ತ್ರಗಳು ನುಣುಪಾಗಿರುವುದರಿಂದ ಕಲ್ಮಷಗಳು ಸುಲಭವಾಗಿ ಒಳಸೇರವು. ಆದ್ದರಿಂದ ಇವನ್ನು ಕೇವಲ ಒಂದು ಒದ್ದೆ ಬಟ್ಟೆಯಿಂದ ಒರೆಸಿ ನಿರ್ಮಲಗೊಳಿಸಬಹುದು. ಹಲವು ಬಾರಿ ನೀರಿನಲ್ಲಿ ಅಥವಾ ಸಾಬೂನು ನೀರಿನಲ್ಲಿ ಕೇವಲ ಅದ್ದಿತೆಗೆದರೂ ಸಾಕು. ಸಾಮಾನ್ಯ ಉಷ್ಣದಿಂದ ಇವಕ್ಕೆ ಏನು ಹಾನಿಯಾಗದು; ಬೆಳಕು ಯಾವ ಪರಿಣಾಮವನ್ನೂ ಉಂಟುಮಾಡದು; ಕ್ರಿಮಿಕೀಟಗಳು ಬಟ್ಟೆಗಳ ಮೇಲೆ ದಾಳಿ ಮಾಡುವುದಿಲ್ಲ. ಅನೇಕ ಸಂದರ್ಭದಲ್ಲಿ ಗಾಜಿನೆಳೆಯ ವಸ್ತ್ರಗಳಿಗಿಂತ ಉತ್ತಮ ವಸ್ತ್ರ ಇನ್ನೊಂದಿಲ್ಲ. ಈಗೀಗ ಉಡುಪುಗಳನ್ನೂ ಗಾಜಿನೆಳೆಯ ವಸ್ತ್ರಗಳಿಂದ ತಯಾರಿಸಲು ಪ್ರಯತ್ನಿಸಲಾಗುತ್ತಿದೆ.

ಮಿಶ್ರ ನೂಲುಗಳು: ಸಾಮಾನ್ಯವಾಗಿ ನೈಸರ್ಗಿಕ ಮತ್ತು ಕೃತಕ ಎಳೆಗಳ ಗುಣಲಕ್ಷಣಗಳಲ್ಲಿ ಹಲವು ಮುಖ್ಯ ವ್ಯತ್ಯಾಸಗಳನ್ನು ಸುಲಭವಾಗಿ ಕಾಣಬಹುದು. ಉಷ್ಣಸುನಮ್ಯತೆ, ಕ್ರಿಮಿನಿರೋಧತೆ ಮತ್ತು ಉತ್ತಮ ಬಾಳಿಕೆಗಳು ಕೃತಕ ಎಳೆಗಳ ಉತ್ತಮಗುಣಗಳು. ಆದರೆ ನೈಸರ್ಗಿಕ ಎಳೆಗಳು ನೀರನ್ನು ಸುಲಭವಾಗಿ ಹೀರಬಲ್ಲವು; ಸುಲಭವಾಗಿ ಬಣ್ಣ ತಳೆಯಬಲ್ಲವು. ಸಾವಯವ ಲೀನಕಾರಿಗಳಲ್ಲಿ ಲೀನವಾಗುವುದಿಲ್ಲ, ಮತ್ತು ಸಾಕಷ್ಟು ಉಷ್ಣವನ್ನು ತಡೆಯಬಲ್ಲುವು, ನೈಸರ್ಗಿಕ ಮತ್ತು ಕೃತಕ ಎಳೆಗಳೆರಡರ ಗುಣಗಳನ್ನೂ ಪಡೆದಿರುವ ಯಾವ ಎಳೆಯೂ ಇಲ್ಲ. ಆದರೆ ಒಂದಕ್ಕಿಂತ ಹೆಚ್ಚು ಎಳೆಗಳಿಂದ ಕೂಡಿದ ಮಿಶ್ರ ನೂಲುಗಳನ್ನು ತಯಾರಿಸುವುದರ ಮೂಲಕ ತಕ್ಕಮಟ್ಟಿಗೆ ಅನೇಕ ಬಗೆಯ ಅಪೇಕ್ಷಿತ ಗುಣಗಳನ್ನೂ ಉಳ್ಳ ಬಟ್ಟೆಗಳನ್ನು ತಯಾರಿಸಲು ಸಾಧ್ಯವಾಗಿದೆ.

ನೈಲಾನ್ ಹತ್ತಿಯ ಮಿಶ್ರ ನೂಲಿಗೆ ಹತ್ತಿಯ ಎಳೆಗಿಂತಲೂ ಹೆಚ್ಚು ಧಾರಣ ಸಾಮಥರ್ಯ್‌ ಇದೆ. ಈ ನೂಲಿನಿಂದ ತಯಾರಿಸಿದ ಬಟ್ಟೆಗಳು ನುಣುಪು ನಯಗಳನ್ನು ಪಡೆದಿದ್ದು ಹತ್ತಿಯ ಬಟ್ಟೆಗಳಿಗಿಂತ ಹಗುರವಾಗಿರುತ್ತವೆ. ಇವು ಹತ್ತಿಯ ಬಟ್ಟೆಯಷ್ಟು ಬೇಗ ಮಲಿನವಾಗುವುದಿಲ್ಲ. ಈ ಬಟ್ಟೆಗಳು ಸುಲಭವಾಗಿ ಸುಕ್ಕಾಗದಂತೆ ನೈಲಾನ್ ಮಿಶ್ರಣ ತಡೆಯುತ್ತದೆ. ಹತ್ತಿಯ ಅಂಶವೂ ಬಟ್ಟೆಗಳಿಗೆ ಹಲವು ಅಪೇಕ್ಷಿತ ಗುಣಗಳನ್ನು ನೀಡುತ್ತದೆ. ಈ ಬಗೆಯ ಬಟ್ಟೆಯಲ್ಲಿರುವ ಮೃದುತ್ವ ಕೇವಲ ನೈಲಾಣಿನಿಂದಾದ ಬಟ್ಟೆಗಳಲ್ಲಿರದು. ಈ ಬಟ್ಟೆ ಹತ್ತಿಯ ಬಟ್ಟೆಗಳಷ್ಟಲ್ಲವಾದರೂ ಸಾಕಷ್ಟು ತೇವವನ್ನು ಹೀರಿಕೊಳ್ಳಬಲ್ಲದು.

ನೈಲಾನ್ ಉಣ್ಣೆಯ ಮಿಶ್ರಣ ಹಗುರವಾದರೂ ಹೆಚ್ಚು ಬಾಳಿಕೆ ಬರುವ ಬೆಚ್ಚನೆಯ ಬಟ್ಟೆಗಳನ್ನು ನೀಡುತ್ತದೆ. ಈ ಬಗೆಯ ಬಟ್ಟೆ ಉಣ್ಣೆ ಎಳೆಯ ಉಷ್ಣ ಬಂಧಕ (ಹೀಟ್ ರಿಟೆನ್ಷನ್), ನೈಲಾನಿನ ನಯ, ಸುಕ್ಕನ್ನು ನಿರೋಧಿಸುವ ಶಕ್ತಿಗಳನ್ನು ಪಡೆದಿರುತ್ತದೆ. ನೈಲಾನ್ ರೇಷ್ಮೆಯ ಮಿಶ್ರಣದಲ್ಲಿ ತೇವವನ್ನು ಹೀರುವ ಶಕ್ತಿಯನ್ನು ರೇಷ್ಮೆಯೂ ಸುಕ್ಕನ್ನು ನಿರೋಧಿಸುವ ಶಕ್ತಿಯನ್ನು ಮತ್ತು ಧಾರಣ ಸಾಮಥರ್ಯ್‌ವನ್ನು ನೈಲಾನೂ ನೀಡುತ್ತವೆ. ನೈಲಾನ್ ರೇಯಾನ್ ಮಿಶ್ರಣ ಬಲು ಮಟ್ಟಿಗೆ ನೈಲಾನ್ ರೇಷ್ಮೆಯ ಮಿಶ್ರಣವನ್ನು ಹೋಲುತ್ತದೆ. ನೈಲಾನ್ ಅರ್ನೆಲ್ ಮಿಶ್ರಣವನ್ನು ಉತ್ತಮದರ್ಜೆಯ ಗ್ಯಾಬರ್ಡಿನ್ ಬಟ್ಟೆಗಳನ್ನು ತಯಾರಿಸಲು ಉಪಯೋಗಿಸಲಾಗುತ್ತದೆ.

ಶೇ.65 ಪಾಲಿ ಎಸ್ಟರನ್ನು ಪಡೆದಿರುವ ಪಾಲಿ ಎಸ್ಟರ್ ಹತ್ತಿಯ ಮಿಶ್ರಣ ಟೆರಿಕಾಟ್ ಎಂದು ಬಹು ಜನಪ್ರಿಯವಾಗಿದೆ. ನೈಲಾನ್ ಹತ್ತಿಯ ಮಿಶ್ರಣದಲ್ಲಿಯಂತೆ ಇದರಲ್ಲಿ ಪಾಲಿ ಎಸ್ಟರ್ ಧಾರಣ ಸಾಮಥರ್ಯ್‌, ಬಾಳಿಕೆ, ಸುಕ್ಕಿಗೆ ನಿರೋಧತೆಯನ್ನು ನೀಡಿ ಉಡುಪಿನ ಮಡಿಕೆ, ನೆರಿಗೆಗಳು ಬೇಗ ಕೆಡದಿರುವಂಥ ಸಾಮಥರ್ಯ್‌ ಒದಗಿಸುತ್ತದೆ. ಮೃದುತ್ವವನ್ನೂ ನೀರನ್ನು ಹೀರಬಲ್ಲ ಶಕ್ತಿಯನ್ನೂ ಹತ್ತಿ ನೀಡುತ್ತದೆ. ಪಾಲಿಎಸ್ಟರ್ ಉಣ್ಣೆಯ ಮಿಶ್ರಣವುಳ್ಳ ಬಟ್ಟೆಗಳಲ್ಲಿ ಉಷ್ಣ ಪ್ರತಿಬಂಧಕ ಶಕ್ತಿಯನ್ನು ಉಣ್ಣೆಯೂ ಬಾಳಿಕೆಯನ್ನು ಮತ್ತು ಮಡಿಕೆಗಳು ಉಳಿಯುವ ಶಕ್ತಿಯನ್ನು ಪಾಲಿ ಎಸ್ಟರೂ ನೀಡುತ್ತವೆ.

ಇದೇ ಬಗೆಯಾಗಿ ಬಟ್ಟೆಗಳ ಗುಣಗಳನ್ನು ಮಾರ್ಪಡಿಸಲು, ನಮಗೆ ಸಾಧ್ಯವಾದಷ್ಟು ಮಟ್ಟಿಗೆ ಅಪೇಕ್ಷಿತ ಗುಣಗಳನ್ನು ಪಡೆದಿರುವ ಬಟ್ಟೆಗಳನ್ನು ಪಡೆಯಲು ಸೂಕ್ತ ರೀತಿಯ ಎಳೆಗಳ ಮಿಶ್ರಣಗಳನ್ನು ತಯಾರಿಸಬಹುದು. ಹೀಗೆಂದ ಮಾತ್ರಕ್ಕೆ ಯಾವ ಎಳೆಯೊಡನೆ ಯಾವ ಎಳೆಯನ್ನಾಗಲೀ ಯಾವ ಪ್ರಮಾಣದಲ್ಲಿಯಾಗಲೀ ಉಪಯೋಗಿಸಬಹುದೆಂದು ತಿಳಿಯಲಾಗದು. ಮಿಶ್ರಣದ ರೀತಿ, ಪ್ರಮಾಣಗಳು ಸರಿಯಾಗಿಲ್ಲದಿದ್ದಲ್ಲಿ ಬಟ್ಟೆ ಉತ್ತಮವಾಗಿರದು. ಕೃತಕ ನೈಸರ್ಗಿಕ ಎಳೆಗಳ ಮಿಶ್ರಣದಲ್ಲಿ ಪ್ರಮಾಣಗಳು ಸರಿಯಾಗಿಲ್ಲದಿದ್ದಲ್ಲಿ ಸಾಮಾನ್ಯವಾಗಿ ಹೆಚ್ಚು ಧಾರಣ ಸಾಮಥರ್ಯ್‌ವನ್ನುಳ್ಳ ಕೃತಕ ಎಳೆಗಳು ನೈಸರ್ಗಿಕ ಎಳೆಗಳನ್ನು ಕತ್ತರಿಸುತ್ತವೆ. ಸೂಕ್ತ ಸಂಸ್ಕರಣಗಳಿಗೆ ಒಳಪಡಿಸದಿದ್ದಲ್ಲಿ ಹತ್ತಿಯಂಥ ನೈಸರ್ಗಿಕ ಎಳೆಗಳು ಸೇರುತ್ತವೆ. ಆದರೆ ಅದೇ ದರದಲ್ಲಿ ಕೃತಕ ಎಳೆ ಸೇರದಿರುವುದರಿಂದ ಇಂಥ ಮಿಶ್ರಣದಿಂದ ತಯಾರಿಸಿದ ಬಟ್ಟೆಗಳು ವಿಚಿತ್ರ ಮತ್ತು ಅಸಹ್ಯ ಆಕಾರಗಳನ್ನು ತಳೆಯುತ್ತವೆ. ಆದ್ದರಿಂದ ಸೂಕ್ತ ಮಿಶ್ರಣಗಳ ಬಗ್ಗೆ ನಿರ್ಣಯಗಳಿಗೆ ಬರಲು ಅನೇಕ ಪ್ರಯೋಗ, ಪರೀಕ್ಷೆಗಳು ಅಗತ್ಯ. ಪ್ರಯೋಗಶಾಲೆ, ಪರೀಕ್ಷಾಲಯಗಳಿಂದ ಅಂಗೀಕರಿಸಲ್ಪಟ್ಟು ಹೊರಬಂದ ಮಿಶ್ರಣಗಳು ಸಾಮಾನ್ಯವಾಗಿ ಯಾವೊಂದು ಎಳೆಯಿಂದಾದ ಬಟ್ಟೆಗಳಿಗಿಂತಲೂ ಹೆಚ್ಚು ಅಪೇಕ್ಷಿತ ಗುಣಗಳನ್ನು ಪಡೆದಿದ್ದು ಹೆಚ್ಚು ಉಪಯುಕ್ತತೆಯನ್ನು ಪಡೆದಿರುತ್ತವೆ. ಕೃತಕ ಎಳೆಗಳಲ್ಲಿರುವ ಉಷ್ಣಸುನಮ್ಯತೆ ಮತ್ತು ಕಲ್ಮಷಗಳನ್ನು ದೂರೀಕರಿಸುವ ಗುಣಗಳು ಈಗಿನ ಉಡುಪುಗಳಲ್ಲಿ ಅತ್ಯಪೇಕ್ಷಿತ ಗುಣಗಳಾಗಿವೆ. ಕೃತಕ ಎಳೆಗಳನ್ನುಳ್ಳ ಮಿಶ್ರಣಗಳೂ ಸಾಕಷ್ಟು ಮಟ್ಟಿಗೆ ಈ ಗುಣಗಳನ್ನು ಪಡೆದಿರುವುದರಿಂದ ವಸ್ತ್ರಜಗತ್ತಿನಲ್ಲಿ ಇವು ಪ್ರಮುಖ ಸ್ಥಾನ ಪಡೆಯುವಂತೆ ಮಾಡಿವೆ.                 (ಕೆ.ಟಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ